ಬೆಳಗಾವಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ, ಚಿನ್ನದ ಸರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನಿಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ, ಶನಿವಾರ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಅಪರಾಧಿಗಳಾದ ಬೆಳಗಾವಿಯ ಗಾಂಧಿನಗರದ ಸಾಕೀಬ್‌ಬೇಗ ಫಯಾಜ ನಿಜಾಮಿ(22), ರಾಜಾರಾಮ ನಗರದ ರವಿ ಸಿದ್ದಪ್ಪ ನಾಯ್ಕೊಡಿ(34) ಅವರಿಗೆ ಜೀವಾವಧಿ ಶಿಕ್ಷೆ ಜೊತೆಗೆ ತಲಾ 8.76 ಲಕ್ಷ ರೂ. ದಂಡ ವಿಧಿಸಿದರೆ, ಕೃತ್ಯಕ್ಕೆ ಸಹಕರಿಸಿದ್ದ ಸಾವಗಾಂವ್ ನಿವಾಸಿಗಳಾದ ರೋಹನ್ ರಾಜೇಶಕುಮಾರ ಪಾಟೀಲ(23) ಹಾಗೂ ಅಶುತೋಷ್ ಮಾರುತಿ ಪಾಟೀಲ(23) ಅವರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 6 ಲಕ್ಷ ರೂ.ದಂಡ ವಿಧಿಸಲಾಗಿದೆ.
2025ರ ಮೇ 10ರಂದು ಬಾಲಕಿಯನ್ನು ಅಪಹರಿಸಿ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ಗೆ ಕರೆದೊಯ್ದು, ಬಲವಂತವಾಗಿ ಮದ್ಯಪಾನ ಮಾಡಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಫಾರ್ಮ್‌ಹೌಸ್ ಬಾಡಿಗೆ ನೀಡಿದ ಕೃತ್ಯ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಮಾರ್ಕೆಟ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣದ ಬಗ್ಗೆ ತನಿಖಾಧಿಕಾರಿಗಳಾದ ಪರಶುರಾಮ ಪೂಜೇರಿ ಹಾಗೂ ಮಹಾಂತೇಶ ಧಾಮಣ್ಣವರು ತನಿಖೆ ನಡೆಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 17 ಸಾಕ್ಷಿಗಳು, 124 ದಾಖಲೆಗಳು ಹಾಗೂ 5 ಮುದ್ದೆಮಾಲುಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾಗಿವೆ ಎಂದು ಪರಿಗಣಿಸಿ, ನಾಲ್ವರಿಗೆ ಶಿಕ್ಷೆ ವಿಧಿಸಿದ್ದಾರೆ.
ಇದನ್ನೂ ಓದಿ: ದೇಶದ ಅತಿ ದೊಡ್ಡ ದರೋಡೆ ಕೇಸ್ | ಬೆಳಗಾವಿಯಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್ ಹೈಜಾಕ್?



















