ಬೆಂಗಳೂರು: ಯುವಕನೊಬ್ಬ ಕುಡಿದ ಮತ್ತಿನಲ್ಲಿ ಗಣೇಶ ವಿಗ್ರಹ ವಿರೂಪಗೊಳಿಸಿರುವ ಘಟನೆ ನಡೆದಿದೆ.
ಬೊಮ್ಮನಹಳ್ಳಿ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಶಿವು ಎಂಬಾತ ಕುಡಿತ ಮತ್ತಿನಲ್ಲಿ ದೇವರಿಗೆ ನಮಸ್ಕರಿಸಲು ಹೋಗಿ ಆಯ ತಪ್ಪಿ ಗಣೇಶನ ಮೇಲೆ ಬಿದ್ದು, ವಿರೂಪಗೊಳಿಸಿದ್ದಾನೆ ಎನ್ನಲಾಗಿದೆ.
ಗರ್ವೇಭಾವಿಪಾಳ್ಯದ ಖಾಸಗಿ ಬಿಲ್ಡಿಂಗ್ ಹತ್ತಿರ ಇತ್ತೀಚೆಗೆ ಗಣೇಶ ವಿಗ್ರಹ ಇರಿಸಲಾಗಿತ್ತು. ಬಿಲ್ಡಿಂಗ್ ಮುಂಭಾಗ 2 ಅಡಿ ಎತ್ತರದ ಕಲ್ಲಿನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಆ. 24ರಂದು ಬೆಳಗ್ಗೆ ಸ್ಥಳೀಯರು ನೋಡಿದಾಗ ವಿಗ್ರಹ ವಿರೂಪಗೊಂಡಿದೆ. ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳಿಗೆ ಹಾನಿಯಾಗಿದೆ.
ಯಾರೋ ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ಸ್ಥಳೀಯರು ದೂರು ನೀಡಿದ್ದರು. ನಂತರ ಸಿಸಿಟಿವಿ ನೋಡಿದಾಗ ಶಿವು ಎಂಬಾತನಿಂದ ಕೃತ್ಯ ನಡೆದಿರುವುದು ಬಯಲಿಗೆ ಬಂದಿದೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧಿಸಿದ್ದಾರೆ.