ಬೆಂಗಳೂರು\ಉಡುಪಿ : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಹಾಗೂ 2023-2024ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ ಎಲ್ಲಾ ಜಿಲ್ಲಾವಾರು ವ್ಯಾಪ್ತಿಯ ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಭಾರತದ ಭವಿಷ್ಯ ಅಡಗಿರುವುದು ಹಳ್ಳಿಯಲ್ಲಿ ಎಂದು ಗಾಂಧೀಜಿ ಅವರು ದೇಶಕ್ಕೆ ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ಮೂಲಕ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ಆಸ್ತಿಗಳ ದಾಖಲೆಗಾಗಿ ‘ಇ-ಸ್ವತ್ತು’ ಯೋಜನೆಯಡಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಇ-ಖಾತಾ ವಿತರಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಲು ಆನ್‌ಲೈನ್ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ಇ-ಖಾತಾಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿದ್ದೇವೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸದಾ ಜನಪರ ಕಾರ್ಯಕ್ರಮವನ್ನು ರೂಪಿಸಿದ್ದೇವೆ.

ಪಂಚಾಯತಿಯಿಂದ ಪಾರ್ಲಿಮೆಂಟ್‌ವರೆಗೆ ಹೊಸ ನಾಯಕರನ್ನ ಬೆಳೆಸಬೇಕು ಎಂಬುದು ನಮ್ಮ ನಾಯಕರಾದ ಶ್ರೀ ರಾಜೀವ್ ಗಾಂಧಿ ಅವರ ಕಲ್ಪನೆಯಾಗಿತ್ತು. ವಿಜಯಪುರ ಜಿಲ್ಲೆಯ ಗ್ರಾ.ಪಂ.ವೊಂದರ ಅಧ್ಯಕ್ಷರಾಗಿದ್ದ ಶ್ರೀ ಬಿ.ಡಿ. ಜತ್ತಿ ಅವರು ದೇಶದ ಉಪ ರಾಷ್ಟ್ರಪತಿಯಾಗಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಯನ್ನು ಸಲ್ಲಿಸಿದ್ದರು. ಸ್ಥಳೀಯ ಸಂಸ್ಥೆಗಳೇ ಸರ್ಕಾರದ ಆಧಾರಸ್ತಂಭ. ಗ್ರಾಮೀಣ ಮಟ್ಟದಲ್ಲಿ ನೀವು ನಾಯಕರಾಗಿ ಬೆಳೆದು ಜನರ ಹೃದಯವನ್ನು ಗೆಲ್ಲಬೇಕು. ಈ ಸರ್ಕಾರ ನಿಮ್ಮ ಪರವಾಗಿ, ನಿಮ್ಮ ಕೈ ‘ಬಲಪಡಿಸಲು ಸದಾ ಜೊತೆಯಾಗಿರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ಆಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ, ಪುರಸ್ಕೃತಗೊಂಡ ಪಂಚಾಯತ್ ಬೇರೆ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ನಾಡ ಗ್ರಾಮ ಪಂಚಾಯತ್‌ಗೆ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಪುರಸ್ಕೃತಗೊಂಡಿದ್ದು, ಪ್ರಶಸ್ತಿಯನ್ನು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನಾಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾರ್ವತಿ ಬಡಾಕೆರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಜಿ. ಮೊಗವೀರ ಪ್ರಶಸ್ತಿ ಸ್ವೀಕರಿಸಿದರು.

ಸ್ಥಳೀಯವಾಗಿ ಸಂಪನ್ಮೂಲಗಳನ್ನು ಸೃಷ್ಟಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ, ಗ್ರಾಮೀಣರ ಜೀವನಮಟ್ಟ ಸುಧಾರಿಸುವಂತೆ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ ಮಾಡಲಾಗುತ್ತಿದೆ.
ಇದನ್ನೂ ಓದಿ : ಮಡಿಕೇರಿ | ಕಾಫಿ ತೋಟದಲ್ಲಿ ಕಳೆದು ಹೋಗಿದ್ದ 2 ವರ್ಷದ ಕಂದಮ್ಮನನ್ನು ಪತ್ತೆ ಹಚ್ಚಿದ ಸಾಕು ನಾಯಿ!



















