ಬೆಳಗಾವಿ: ಗಾಂಧಿ ಪರಿವಾರ ಡಿ. 26ಕ್ಕೆ ಬೆಳಗಾವಿಗೆ ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅಧ್ಯಕ್ಷತೆಯ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಗಾಂಧಿ ಪರಿವಾರ ಹಾಗೂ ಕಾಂಗ್ರೆಸ್ ನಾಯಕರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಡಿ. 26 ಹಾಗೂ 27ರಂದು ಅಧಿವೇಶನ ನಡೆಯಲಿದೆ ಎಂದಿದ್ದಾರೆ.
ಈ ಸಮಾವೇಶದ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕದ ಜನತೆ ಬೆಳಗಾವಿಗೆ ಬರಬೇಕು. ಮಹಾತ್ಮಾ ಗಾಂಧಿ ಅಧ್ಯಕ್ಷರಾಗಿದ್ದ ಅಧಿವೇಶನದ ಎಲ್ಲಾ ಮಾಹಿತಿ ಸಂಗ್ರಹಿಸಿದ್ದೇವೆ. ಅಂತಹ ಇತಿಹಾಸ ಪುಟಕ್ಕೆ ಮತ್ತೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದೇವೆ. ಜನರು ಇಲ್ಲಿಗೆ ಬರಬೇಕು. ಪಾರ್ಟಿ, ಪಕ್ಷ ಎಂದು ಯೋಚನೆ ಮಾಡಬೇಡಿ. ನಮ್ಮ ಪಕ್ಷ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬುವುದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.
ಡಿ. 26 ರಿಂದ ಅಧಿಕೃತ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಡಿಸೆಂಬರ್ 26 ರಂದು ಮಧ್ಯಾಹ್ನ 3 ಗಂಟೆ ಎಐಸಿಸಿ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದೆ. 1924 ರ ಡಿಸೆಂಬರ್ 26 ರ ಮಧ್ಯಾಹ್ನ 3ಕ್ಕೆ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಣಿ ಸಭೆ ನಡೆದಿತ್ತು. ಅದೇ ಸಮಯದಲ್ಲಿ ಈ ಸಭೆ ನಡೆಯಲಿದೆ ಎಂದಿದ್ದಾರೆ.
ಡಿ. 27 ರಂದು ಬೆಳಗ್ಗೆ 10.30 ಕ್ಕೆ ಮಹಾತ್ಮಾ ಗಾಂಧಿ ಮೂರ್ತಿ ಅನಾವರಣ ಆಗಲಿದೆ. 27ರ ಮಧ್ಯಾಹ್ನ 12ಕ್ಕೆ ಶತಮಾನೋತ್ಸವ ಸಮಾವೇಶ ನಡೆಯಲಿದೆ ಎಂದಿದ್ದಾರೆ. ಈಗಾಗಲೇ ಹಲವಾರು ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ.