ಬೆಂಗಳೂರು: ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ನಾವೆಲ್ಲರೂ ಗಾಂಧೀಜಿಯವರನ್ನೇ ಮರೆತುಬಿಟ್ಟಿದ್ದೇವೆ. ನಮ್ಮದೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡ್ತಿರೋ ನಾವು, ಗಾಂಧಿ ಮೌಲ್ಯಗಳನ್ನ ಪಕ್ಕಕ್ಕಿಟ್ಟು ದಶಕಗಳೇ ಕಳೆದು ಹೋಗಿವೆ. ಇದೀಗ ಮತ್ತೆ ‘ಗಾಂಧಿ ಮತ್ತು ನೋಟು’ ಎಂಬ ಸಿನಿಮಾ ನಮ್ಮ ಕಣ್ಣು ತೆರೆಸಲು ರೆಡಿಯಾಗಿದೆ.
2025ರ ಡಿಜಿಟಲ್ ಯುಗದಲ್ಲಿ ‘ಗಾಂಧಿ ಮತ್ತು ನೋಟು’ ಒಂದು ವಿಭಿನ್ನವಾದ ಕಂಟೆಂಟ್ ಕೊಡೋಕೆ ತುದಿಗಾಲಲ್ಲಿ ನಿಂತಿದೆ. ಯೋಗಿ ದೇವಗಂಗೆ ಹಾಗೂ ಗುರುಪ್ರಸಾದ್ ಚಂದ್ರಶೇಖರ್ ಜುಗಲ್ ಬಂಧಿಯಲ್ಲಿ ಗಾಂಧಿ ನೋಟಿನಲ್ಲಿ ನಗ್ತಿದಾರೆ. ಮೊದಲಿಗೆ ದುಡ್ದಾ ಅಥವಾ ಮೌಲ್ಯನ ಎಂಬ ಪ್ರಶ್ನೆಯೂ ಬಹಳ ಕ್ಯಾಚಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯ ಸುತ್ತಲು ಚಿತ್ರೀಕರಣ ಗೊಂಡಿರುವ ಗಾಂಧಿ ಮತ್ತು ನೋಟು ಚಿತ್ರಕ್ಕೆ ಸುಧಾರಾಣಿ ಹೆಚ್ ಆರ್, ವೀಣಾ ಪದ್ಮನಾಭ್, ಬಿ ಎನ್ ಮಂಜುನಾಥ್ ಹಣ ಹೂಡಿ ನಿರ್ಮಾಪಕರಾಗಿದ್ದಾರೆ. ಯೋಗಿ ದೇವಗಂಗೆರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ಗುರುಪ್ರಸಾದ್ ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ.

ಈ ಹಿಂದಿನ ಚಿತ್ರದಲ್ಲೂ ನಿರ್ದೇಶಕರಾದ ಯೋಗಿ ದೇವಗಂಗೆ ಹಾಗೂ ನವೀನ್ ಸೋಮನಹಳ್ಳಿ ಯವರ ಜೊತೆ ಕೆಲಸ ಮಾಡಿದ್ದ ಗುರುಪ್ರಸಾದ್ ಚಂದ್ರಶೇಖರ್, ತನಗೆ ನಿರ್ದೇಶಕನ, ನಿರ್ದೇಶನದ ಜವಾಬ್ದಾರಿಗಳು ಇನ್ನೂ ಹೆಚ್ಚೆಚ್ಚು ತಿಳಿಯಲಿ ಎಂದು ಒಂದು ಪ್ರಯತ್ನವಾಗಿ ಸ್ನೇಹಿತರಾದ ಬಸವರಾಜ್ ಕುಮಾರ್ ರವರ ಜೊತೆ ಸೇರಿ “ಗಾಂಧಿ ನೋ2” ಎನ್ನುವ ಕಿರುಚಿತ್ರ ತಯಾರು ಮಾಡಿ ಯೋಗಿ ದೇವಗಂಗೆರವರಿಗೆ ಕಿರು ಚಿತ್ರದ ಬಗ್ಗೆ ಹೇಳಿ, ತೋರಿಸಿದಾಗ ತುಂಬಾ ಪ್ರೀತಿಯಿಂದ ಸಲಹೆಗಳನ್ನು ಕೊಟ್ಟು ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿ ಈ ಕಥಾ ಎಳೆಯನ್ನು ಬೇರೆಯೇ ಒಂದು ಆಯಾಮದಲ್ಲಿ, ದೃಷ್ಟಿಕೋನದಲ್ಲಿ ಪೂರ್ತಿ ಹೊಸ ತರಹದಲ್ಲಿ ಗಾಂಧೀಜಿಯವರ ಮೌಲ್ಯಗಳನ್ನು ದೊಡ್ಡ ಪರದೆಯ ಮೇಲೆ ಸಮಕಾಲೀನ ವಿದ್ಯಮಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಟ್ಟಿ ಕೊಡಬಹುದು ಎಂದು ಗುರುಪ್ರಸಾದ್ ರವರಿಗೆ ತಿಳಿಸುತ್ತಾರೆ.
ಗಾಂಧಿ ಮತ್ತು ನೋಟು ಚಲನಚಿತ್ರದ ಕಥೆಯ ಚರ್ಚೆಯಲ್ಲಿ ಯೋಗಿ ದೇವಗಂಗೆಯವರ ಜೊತೆಯಲ್ಲಿ ಭಾಗಿಯಾದ ಗುರುಪ್ರಸಾದ್ ಚಂದ್ರಶೇಖರ್ ಕಥೆಯಲ್ಲಿನ ಮಹಾತ್ಮ ಗಾಂಧೀಜಿಯವರ ಮೌಲ್ಯ ಸಾರುವ ಮುಖ್ಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಿರುವುದನ್ನು ಅರಿತು ಆ ಪಾತ್ರಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ಗೀತ ರಚನೆಕಾರರು ಹಾಗೂ ನಿರ್ದೇಶಕರು ಮತ್ತು ತನ್ನ ಗುರುಗಳಾದ ಡಾ.ವಿ. ನಾಗೇಂದ್ರಪ್ರಸಾದ್ ರವರ ಮಗಳು ದಿವಿಜ ನಾಗೇಂದ್ರಪ್ರಸಾದ್ ರವರು ಸರಿಯಾದ ಆಯ್ಕೆಯಾಗ ಬಹುದೆಂದು ಅನ್ನಿಸಿ ನಿರ್ದೇಶಕರಿಗೆ ತಿಳಿಸಿದಾಗ ನಿರ್ದೇಶಕರಾದ ಯೋಗಿ ದೇವಗಂಗೆರವರು ದಿವಿಜ ರವರ ಭಾವಚಿತ್ರ ಮತ್ತು ನಟನೆಯ ಚಿತ್ರಿಕೆಗಳನ್ನು ನೋಡಿ ತಮ್ಮ ಚಿತ್ರಕಥೆಯ ಪಾತ್ರಕ್ಕೆ ಹೊಂದಾಣಿಕೆ ಯಾಗುವುದನ್ನು ಮನಗಂಡು ವಿ.ನಾಗೇಂದ್ರಪ್ರಸಾದ್ ರವರಿಗೆ ಚಿತ್ರದ ಕಥೆಯನ್ನು ಹೇಳಿದಾಗ ಅವರು ಕಥೆಯ ಸೂಕ್ಷ್ಮಗಳನ್ನು ಇಷ್ಟಪಟ್ಟು ಗ್ರೀನ್ ಸಿಗ್ನಲ್ ಕೊಡುತ್ತಾರೆ.

ಹೀಗೆ ದಿವಿಜ ನಾಗೇಂದ್ರಪ್ರಸಾದ್ ರವರು ಮುಖ್ಯ ಪಾತ್ರಧಾರಿಯಾಗಿ ಗಾಂಧಿ ಮತ್ತು ನೋಟು ಚಿತ್ರತಂಡ ಸೇರುತ್ತಾರೆ. ಚಿತ್ರತಂಡ ಹಲಸೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನು ನೆರವೇರಿಸಿ ಕೊಂಡಿರುತ್ತದೆ.
ಪುರುಷೋತ್ತಮ್ ತಲವಾಟ್ , ಮುರುಡಯ್ಯ ಸಿ ಆರ್,ವಿಶಾಲ್ ಜೈವಿಕ್, ಲೋಕೇಶ್ ಕೋಗಿಲೆ, ಪ್ರಜ್ಞಾ ಬ್ರಹ್ಮಾವರ, ವಿಲಾಸ್ ಕುಲಕರ್ಣಿ ನಟಿಸಿದ್ದಾರೆ. ವಾಣಿ ಹರಿಕೃಷ್ಣ ಸಂಗೀತ, ವಿ. ನಾಗೇಂದ್ರಪ್ರಸಾದ್ ಸಾಹಿತ್ಯ,ಅಚ್ಚು ಸುರೇಶ್ ಛಾಯಾಗ್ರಹಣ, ವಸಂತ್ ಕುಮಾರ್ ಕೆ ಸಂಕಲನ, ವಿ.ಎಲ್ ಆಶ್ರಿತ್ ಸಹ ನಿರ್ದೇಶನ ಗಾಂಧಿ ಮತ್ತು ನೋಟು ಚಿತ್ರದಲ್ಲಿದೆ.
ಯೋಗಿ ದೇವಗಂಗೆಯವರ ಈ ಚಿತ್ರ ಮೈಸೂರು ಚಲನಚಿತ್ರೋತ್ಸವ ಹಾಗೂ ಇತರ ಅನೇಕ ಮಕ್ಕಳ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಮುಡಿಗೇರಿಸಿ ಕೊಂಡಿರುತ್ತದೆ. ಮೌತ್ ಪಬ್ಲಿಸಿಟಿ ನೋಡಿಯೇ ಥಿಯೇಟರ್ ಗಳಿಗೆ ಬರ್ತೀವಿ ಅನ್ನೋ ಪ್ರೇಕ್ಷಕರಿಗೆ ‘ಗಾಂಧಿ ಮತ್ತು ನೋಟು’ ಪಕ್ಕ ಪೈಸಾ ವಸೂಲ್ ಭರವಸೆ ಕೊಡ್ತಿದೆ.