ಕೋಲ್ಕತ್ತಾ: ಆಸ್ಟ್ರೆಲಿಯಾದಲ್ಲಿ(Australia) ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ 3-1 ಅಂತರದಿಂದ ಸೋತ ಹಿನ್ನೆಲೆಯಲ್ಲಿ ಕೋಚ್ ಗೌತಮ್ ಗಂಭೀರ್(Gautam Gambhir) ಕಾರ್ಯವೈಖರಿ ಬಗ್ಗೆ ಟೀಕೆಗಳು ವ್ಯಕ್ತಗೊಂಡಿವೆ. ಇದೀಗ ಆ ಸಾಲಿಗೆ ಮಾಜಿ ಭಾರತ ಬ್ಯಾಟರ್ ಮನೋಜ್ ತಿವಾರಿ ಸೇರಿದ್ದಾರೆ. ಗಂಭೀರ್ ಭಾರತದ ಮುಖ್ಯ ಕೋಚ್ ಆಗಿರುವ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಗಂಭೀರ್ ಆಯ್ಕೆ ಸರಿಯಾದ ಆಯ್ಕೆ ಅಲ್ಲ ಎಂದು ಹೇಳಿದ್ದಾರೆ.
ಗಂಭೀರ್ ಐಪಿಎಲ್ ತಂಡಗಳನ್ನು ಕೋಚಿಂಗ್ ಮಾಡುವಲ್ಲಿ ಮಾತ್ರ ಪರಿಣತಿ ಹೊಂದಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಈ ವೇಳೆ ಅವರು ಭಾರತ ತಂಡದ ಇತ್ತೀಚಿನ ಹೀನಾಯ ಪ್ರದರ್ಶನಗಳನ್ನು ಉದಾಹರಿಸಿದರ.

ಗಂಭೀರ್ ಕೋಚಿಂಗ್‌ನಲ್ಲಿ ಭಾರತ ತಂಡ 27 ವರ್ಷಗಳಲ್ಲಿ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋತಿತು. ನ್ಯೂಜಿಲ್ಯಾಂಡ್ ವಿರುದ್ಧ ತನ್ನ ತವರಿನಲ್ಲಿ 0-3 ಅಂತರದಲ್ಲಿ ವೈಟ್‌ವಾಷ್ ಮಾಡಿಸಿಕೊಂಡಿತು. ಇದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಪ್ರದರ್ಶನ. ಭಾರತವು 10 ವರ್ಷಗಳಲ್ಲಿ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಕಳೆದುಕೊಂಡಿತು ಎಂದು ಹೇಳಿದರು.
ಐಪಿಎಲ್‌ನ ಕ್ರೀಡಾಂಗಣದಲ್ಲಿ ಗಂಭೀರ್ ಜೊತೆ ತೀವ್ರ ವಾಗ್ವಾದ ಮಾಡಿದ್ದ ತಿವಾರಿ, ಅವರು ಕೋಚ್ ಆಗಿ ನೇಮಕಗೊಂಡಿರುವುದರಿಂದ ಈ ಹಿನ್ನಡೆಗಳು ಆಗಿವೆ ಎಂದು ಹೇಳಿದರು.
“ನೀವು ಗಂಭೀರ್ ಕೋಚಿಂಗ್‌ನಲ್ಲಿ ಸಿಕ್ಕಿದ ಫಲಿತಾಂಶಗಳನ್ನು ನೋಡಬಹುದು. ಫಲಿತಾಂಶಗಳು ಸುಳ್ಳು ಹೇಳುವುದಿಲ್ಲ. ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ. ದಾಖಲೆಗಳೇ ಮಾತನಾಡುತ್ತವೆ,” ತಿವಾರಿ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ .
ಸದ್ಯ ಪಶ್ಚಿಮ ಬಂಗಾಳ(West Bengal) ಸರ್ಕಾರದಲ್ಲಿ ಕ್ರೀಡಾ ಉಪ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ 39 ವರ್ಷದ ತಿವಾರಿ, ಗಂಭೀರ್ ಅವರ ಕೋಚಿಂಗ್ ವಿಧಾನಗಳೇ ಸರಿ ಇಲ್ಲ ಎಂದು ಹೇಳಿದ್ದಾರೆ.
ದ್ರಾವಿಡ್ ಪರಂಪರೆ ಮುಂದುವರಿಸುತ್ತಿಲ್ಲ
“ಗೌತಮ್ ಗಂಭೀರ್ ಕೋಚಿಂಗ್‌ನಲ್ಲಿ ರಾಹುಲ್ ದ್ರಾವಿಡ್ ಮಾಡಿದ ಉತ್ತಮ ಕೆಲಸವನ್ನು ಮುಂದುವರಿಸುತ್ತಿಲ್ಲ. ಇದು ಅವರಿಗೆ ಗೆಲುವಿನ ದಾರಿ ಕಂಡುಕೊಳ್ಳುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅವರು ಭಾರತೀಯ ತಂಡದ ಕೋಚಿಂಗ್‌ನಲ್ಲಿ ಯಾವುದೇ ಅನುಭವ ಹೊಂದಿಲ್ಲ ಎಂಬುದು ಸ್ಪಷ್ಟ. ಟೆಸ್ಟ್ ಕ್ರಿಕೆಟ್ ಅಥವಾ ಏಕದಿನ ಸರಣಿಯ ವಿಚಾರದಲ್ಲಿ, ಅವರು ಯಾವುದೇ ಕೋಚಿಂಗ್ ಅನುಭವ ಹೊಂದಿಲ್ಲ,” ಎಂದು ತಿವಾರಿ ಹೇಳಿದರು.
ವಿವಿಎಸ್ ಲಕ್ಸ್ಮಣ್ ಅಥವಾ ಸಾಯಿರಾಜ್ ಬಹುತುಲೆ ಉತ್ತಮ ಆಯ್ಕೆ
“ವಿವಿಎಸ್ ಲಕ್ಸ್ಮಣ್ ಮತ್ತು ಸಾಯಿರಾಜ್ ಬಹುತುಲೆ ಭಾರತ ತಂಡದ ಕೋಚಿಂಗ್‌ಗೆ ಉತ್ತಮ ಆಯ್ಕೆ. ಇವರಂತಹವರು ಮುಂದಿನ ಮುಖ್ಯ ಕೋಚ್ ಆಗಲು ಸರಿಯಾದ ಅಭ್ಯರ್ಥಿಗಳು. ಇವರು ಎನ್‌ಸಿಎ (ನ್ಯಾಷನಲ್ ಕ್ರಿಕೆಟ್ ಅಕಾಡೆಮಿ) ಯೊಂದಿಗೆ ಹಲವಾರು ವರ್ಷಗಳ ಸಂಬಂಧ ಹೊಂದಿದ್ದಾರೆ. ರಾಹುಲ್ ದ್ರಾವಿಡ್ ಲಭ್ಯವಿಲ್ಲದ ಸಂದರ್ಭದಲ್ಲಿ ಇವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು.” ಎಂದು ತಿವಾರಿ ಹೇಳಿದ್ದಾರೆ.
” ಹಿರಿಯರ ನಡುವೆಯೇ ಗೌತಮ್ ಗಂಭೀರ್ ಹೇಗೆ ಕೋಚ್ ಆಗಿ ಆಯ್ಕೆಯಾದರು ಎಂಬುದು ಯಾರಿಗೂ ಗೊತ್ತಿಲ್ಲ. ಕೋಚಿಂಗ್‌ನಲ್ಲಿ ಅನುಭವವಿಲ್ಲದೆ ಬಂದು ಕೆಲಸವನ್ನು ಮಾಡುವುದೇ ದೊಡ್ಡ ತಪ್ಪು. ಅವರ ದ್ವೇಷಮಯ ಸ್ವಭಾವ ಮತ್ತು ಕೆಲವೊಂದು ಅಂಶಗಳಲ್ಲಿ ಅತಿಯಾದ ಆಕ್ರಮಣಶೀಲತನ ಉತ್ತಮ ಫಲಿತಾಂಶ ತರಲು ಸಾಧ್ಯವಿಲ್ಲ,ʼʼ ಎಂದು ತಿವಾರಿ ಅಭಿಪ್ರಾಯಪಟ್ಟರು.
ಗಂಭೀರ್ ಐಪಿಎಲ್ ಗೆಲುವುಗಳೇ ಯೋಗ್ಯತೆಗಳಲ್ಲ
ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದರೂ, ತಿವಾರಿ ಈ ಸಾಧನೆಗಳೇ ಅಳತೆ ಮಾನದಂಡವಲ್ಲ ಎಂದು ಅವರು ಹೇಳಿದ್ದಾರೆ. ಗಂಭೀರ್ ಐಪಿಎಲ್‌ನಲ್ಲಿ ಕೆಲವೊಂದು ಒಳ್ಳೆಯ ಫಲಿತಾಂಶಗಳನ್ನು ತೋರಿಸಿದ್ದಾರೆ. ಆದರೆ, ನಿಮಗೆ ಭಾರತ ತಂಡದ ಕೋಚಿಂಗ್‌ಗೆ ಬೇಕಾದ ಅನುಭವವಿಲ್ಲದಿದ್ದಾಗ ಇದು ತುಂಬಾ ಕಠಿಣವಾಗುತ್ತದೆ ಎಂದು ಹೇಳಿದರು.