ಉಡುಪಿ: ಗೋವಾದ ಪರ್ಯೆ ಸಮೀಪದ ವಲವಂತಿ ನದಿಯಲ್ಲಿ ಕದಂಬರ ಕಾಲದ್ದು ಎನ್ನಲಾದ ಗಜಲಕ್ಷ್ಮಿ ವಿಗ್ರಹ ಪತ್ತೆಯಾಗಿದೆ. ಈ ಶಿಲ್ಪ ಅಪೂರ್ವವಾದ ವಿಗ್ರಹವಾಗಿದ್ದು ಚಾರಿತ್ರಿಕ ಮಹತ್ವವನ್ನು ಹೊಂದಿದೆ ಎಂದು ಉಡುಪಿಯ ಆದಿಮ ಕಲಾ ಟ್ರಸ್ಟ್ ಸ್ಥಾಪಕ ಸಂಚಾಲಕ ಪ್ರೊ.ಟಿ ಮುರುಗೇಶಿ ತಿಳಿಸಿದ್ದಾರೆ.
ಉನ್ನತವಾದ ಪದ್ಮಪೀಠದ ಮೇಲೆ, ಅಭಯ ಮತ್ತು ವರದ ಹಸ್ತೆಯಾಗಿ ಕುಳಿತಿರುವ ಲಕ್ಷ್ಮಿಯು ಹಿಂದಿನ ಬಲಗೈಯಲ್ಲಿ ಕಮಲದ ಮೊಗ್ಗು, ಹಿಂದಿನ ಎಡಗೈಯಲ್ಲಿಯೂ ಸಹ ಕಮಲದ ಮೊಗ್ಗನ್ನು ಹಿಡಿದಿದ್ದಾಳೆ. ಕಿವಿಯಲ್ಲಿ ಮಕರಕುಂಡಲಗಳಿವೆ, ಆಕರ್ಷಕ ಕರಂಡಮುಕುಟವನ್ನು ಧರಿಸಿದ ದೇವಿಯು ಮುಖದಲ್ಲಿ ದೈವೀಕಳೆಯ ವರ್ಚಸ್ಸು ಎದ್ದು ತೋರುತ್ತದೆ ಎಂದು ಹೇಳಿದ್ದಾರೆ.
ದೇವಿಯ ಹಿಂಭಾಗದಲ್ಲಿ ಅಂಡಾಕಾರದ ಪ್ರಭಾವಳಿಯಿದ್ದು, ಮಧ್ಯದಲ್ಲಿ ಸಿಂಹದ ಲಲಾಟ ಬಿಂಬವಿದೆ. ಕಂಠೀಹಾರ, ಕೊರಳಹಾರ, ಕೇಯೂರ, ಮುಂತಾದ ಆಭರಣಗಳಿಂದ ಅಲಂಕೃತಳಾದ ಲಕ್ಷ್ಮಿಯ ಎಡ-ಬಲಗಳಲ್ಲಿ ಪವಿತ್ರ ಕಳಸಗಳನ್ನು ಹಿಡಿದಿರುವ ಎರಡು ಆನೆಗಳಿವೆ. ಪೀಠದ ಮಧ್ಯಭಾಗದಲ್ಲಿ ಗಂಡಭೇರುಂಡದ ಲತಾಕೋಷ್ಟಕವಿದೆ. ಶಿಲ್ಪವು ಸುಮಾರು 10ನೇ ಶತಮಾನದ ಶಿಲ್ಪಶೈಲಿಯಲ್ಲಿದ್ದು, ಗೋವಾ ಕದಂಬರ ಶಿಲ್ಪಶೈಲಿಯ ಉತ್ತಮ ಉದಾಹರಣೆಯಾಗಿದೆ. ಈ ಶಿಲ್ಪವು 50 ಸೆ.ಮೀ. ಎತ್ತರ ಹಾಗೂ 61 ಸೆ.ಮೀ. ಅಗಲವಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಿಮ ಕಲಾ ಟ್ರಸ್ಟ್ ಅಧ್ಯಕ್ಷರಾದ ಗೋವಾದ ಡಾ. ರಾಜೇಂದ್ರ ಕೇರ್ಕರ್ ಅವರು ಈ ವಿಗ್ರಹವನ್ನು ಪತ್ತೆಹಚ್ಚಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.



















