ಗದಗ: ಗದಗದ ತಿಲಕ್ ಪಾರ್ಕ್ ಬಳಿ ವಿದ್ಯುತ್ ಸ್ಪರ್ಶದಿಂದ ಐದು ಬಿಡಾಡಿ ದನಗಳು ಸಾವನ್ನಪ್ಪಿದ್ದು, ಸಾರ್ವಜನಿಕರು ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರ ಪ್ರಕಾರ, ಹೆಸ್ಕಾಂಗೆ ಸೇರಿದ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿಸಿ) ಬಳಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಟ್ರಾನ್ಸ್‌ಫಾರ್ಮರ್‌ಗೆ ವಿದ್ಯುತ್ ಲೀಕೆಜ್ ಆಗಿ ದನಗಳು ಸ್ಪರ್ಶಕ್ಕೆ ಒಳಗಾಗಿ ನರಳಾಡಿ ಪ್ರಾಣ ಬಿಟ್ಟಿವೆ.
ಈ ದುರ್ಘಟನೆಯಲ್ಲಿ ನಾಲ್ಕು ಆಕಳುಗಳು ಮತ್ತು ಒಂದು ಕರು ಸಾವನ್ನಪ್ಪಿದ್ದು, ಸ್ಥಳದಲ್ಲಿ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ. ಹೆಸ್ಕಾಂದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಿಸಿ ಬಳಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಗಂಭೀರ ನಿರ್ಲಕ್ಷ್ಯವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಕುರಿತು ಮಾತನಾಡಿದ ಹೋರಾಟಗಾರ ರಾಜು ಖಾನಪ್ಪ, “ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಮಾಯಕ ದನಗಳು ಬಲಿಯಾಗಿವೆ. ತಕ್ಷಣವೇ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಇನ್ನೊಬ್ಬ ಹೋರಾಟಗಾರ ಮಹೇಶ್ ರೋಖಡೆ ಕೂಡ, “ಟ್ರಾನ್ಸ್‌ಫಾರ್ಮರ್ ಸುತ್ತ ಸುರಕ್ಷತಾ ವ್ಯವಸ್ಥೆ ಮಾಡದೇ ಇರುವುದು ಅಸಮಾಧಾನಕರ. ದನಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು,” ಎಂದು ಒತ್ತಾಯಿಸಿದರು. ಸ್ಥಳೀಯರು ನಗರಸಭೆ ಹಾಗೂ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು



















