ವಾಷಿಂಗ್ಟನ್: ಸುಂಕದ ವಿಚಾರವಾಗಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಹಳಸಿರುವ ಹೊತ್ತಿನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಶುಕ್ರವಾರವಷ್ಟೇ “ಭಾರತ ಮತ್ತು ರಷ್ಯಾ ನಮ್ಮ ಕೈಬಿಟ್ಟು ಹೋದವು. ಆ ಎರಡೂ ದೇಶಗಳು ಈಗ ಕೆಟ್ಟ ಚೀನಾದ ಪಾಲಾದವು” ಎಂದು ಹೇಳಿದ್ದ ಟ್ರಂಪ್ ಇಂದು ಯೂಟರ್ನ್ ಹೊಡೆದಿದ್ದಾರೆ.
ಭಾರತದ ಪ್ರಧಾನಿ ಮೋದಿಯವರನ್ನು ಉಲ್ಲೇಖಿಸಿ, ‘ನಾವೆಂದಿಗೂ ಸ್ನೇಹಿತರು’ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರತಿಕ್ರಿಯಿಸಿದ್ದು, “ನಾನೂ ಅವರ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ” ಎಂದು ಹೇಳಿದ್ದಾರೆ. ಅಲ್ಲದೇ, ಭಾರತ ಮತ್ತು ಅಮೆರಿಕ “ಅತ್ಯಂತ ಸಕಾರಾತ್ಮಕ” ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿವೆ ಎಂದಿದ್ದಾರೆ.
“ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧದ ಬಗೆಗಿನ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ ಮತ್ತು ಸಂಪೂರ್ಣವಾಗಿ ಗೌರವಿಸುತ್ತೇನೆ. ಭಾರತ ಮತ್ತು ಅಮೆರಿಕ ಅತ್ಯಂತ ಸಕಾರಾತ್ಮಕ ಮತ್ತು ಮುಂದಾಲೋಚನೆಯುಳ್ಳ ಸಮಗ್ರ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿವೆ,” ಎಂದು ಪ್ರಧಾನಿ ಮೋದಿ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ಹೇಳಿದ್ದೇನು?
ಇದಕ್ಕೂ ಮುನ್ನ ಶ್ವೇತಭವನದಲ್ಲಿ ಟ್ರಂಪ್ ಅವರು ಭಾರತ-ಅಮೆರಿಕ ಸಂಬಂಧವನ್ನು “ಅತ್ಯಂತ ವಿಶೇಷವಾದ ಸಂಬಂಧ” ಎಂದು ಕರೆದಿದ್ದಾರೆ. ನಾನು ಹಾಗೂ ಪ್ರಧಾನಿ ಮೋದಿ “ಯಾವಾಗಲೂ ಸ್ನೇಹಿತರಾಗಿರುತ್ತೇವೆ” ಎಂದೂ ಹೇಳಿದ್ದಾರೆ. ಆದಾಗ್ಯೂ, ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಯಾವಾಗಲೂ ಪ್ರಧಾನಿ ಮೋದಿಯವರೊಂದಿಗೆ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಮಹಾನ್ ಪ್ರಧಾನಿ. ಆದರೆ ಈಗ ಅವರು ಏನು ಮಾಡುತ್ತಿದ್ದಾರೋ ಅದು ನನಗೆ ಇಷ್ಟವಾಗುತ್ತಿಲ್ಲ. ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಸಂಬಂಧವಿದೆ, ಚಿಂತಿಸುವ ಅಗತ್ಯವಿಲ್ಲ,” ಎಂದು ಟ್ರಂಪ್ ಹೇಳಿದ್ದಾರು. ಜೊತೆಗೆ ವ್ಯಾಪಾರ ಮಾತುಕತೆಗಳು “ಚೆನ್ನಾಗಿ ನಡೆಯುತ್ತಿವೆ” ಎಂದೂ ಅವರು ತಿಳಿಸಿದ್ದಾರೆ.
ಸಂಬಂಧದಲ್ಲಿನ ಬಿಕ್ಕಟ್ಟು
ಇತ್ತೀಚಿನ ವಾರಗಳಲ್ಲಿ, ಭಾರತವು ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಭಾರತದ ಮೇಲೆ ದ್ವಿತೀಯ ಹಂತದ ಸುಂಕಗಳನ್ನು ವಿಧಿಸಿದ ನಂತರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಅಮೆರಿಕವು ಭಾರತದ ರಫ್ತುಗಳ ಮೇಲೆ ಶೇ.50 ಸುಂಕವನ್ನು ವಿಧಿಸಿದೆ. ಇದನ್ನು ಭಾರತ “ಅನ್ಯಾಯ, ಅವೈಜ್ಞಾನಿಕ ಮತ್ತು ಅವಿವೇಕದ ನಡೆ” ಎಂದು ಖಂಡಿಸಿದೆ.
ಇದರ ಬೆನ್ನಲ್ಲೇ, ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಆತ್ಮೀಯತೆ ಪ್ರದರ್ಶಿಸಿದ್ದು, ಟ್ರಂಪ್ ಸಿಟ್ಟನ್ನು ನೆತ್ತಿಗೇರಿಸಿತ್ತು.ಇದರ ಬೆನ್ನಲ್ಲೇ ಶುಕ್ರವಾರ ಟ್ರಂಪ್ ಮಾತನಾಡಿ, “ಭಾರತ, ರಷ್ಯಾವನ್ನು ನಾವು ಕಳೆದುಕೊಂಡೆವು” ಎಂದು ಟ್ರಂಪ್ ಹೇಳಿಕೆ ನೀಡಿದ್ದರು.



















