ನವದೆಹಲಿ: ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ವಿಶ್ವದಾಖಲೆಯ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದ ಬಿಹಾರದ 14 ವರ್ಷದ ಪೋರ ವೈಭವ್ ಸೂರ್ಯವಂಶಿ, ಮಣಿಪುರ ವಿರುದ್ಧದ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ, ಅವರು ತಂಡದಿಂದ ಹೊರಗುಳಿಯುತ್ತಿರುವುದು ಗಾಯದ ಸಮಸ್ಯೆಯಿಂದಲ್ಲ, ಬದಲಿಗೆ ದೇಶದ ಅತ್ಯುನ್ನತ ಗೌರವವೊಂದನ್ನು ಸ್ವೀಕರಿಸಲು ಎಂಬುದು ವಿಶೇಷ.
ವೈಭವ್ ಸೂರ್ಯವಂಶಿ ಅವರು ಪ್ರತಿಷ್ಠಿತ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ. ಶುಕ್ರವಾರ (ಡಿ.26) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೈಭವ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ವೈಭವ್ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಡಿಸೆಂಬರ್ 26ರಂದು ನಡೆಯಲಿರುವ ಮಣಿಪುರ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶವೂ ವೈಭವ್ ಅವರಿಗೆ ದೊರೆಯಲಿದೆ.
ಮೊದಲ ಪಂದ್ಯದಲ್ಲೇ ದಾಖಲೆಗಳ ಸರಮಾಲೆ
ಬುಧವಾರವಷ್ಟೇ ಅರುಣಾಚಲ ಪ್ರದೇಶ ವಿರುದ್ಧ ನಡೆದಿದ್ದ ತಮ್ಮ ಚೊಚ್ಚಲ ಪಂದ್ಯದಲ್ಲಿ ವೈಭವ್ ರುದ್ರತಾಂಡವವಾಡಿದ್ದರು. ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿದ್ದ ಅವರು, 36 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಅಷ್ಟೇ ಅಲ್ಲ, 59 ಎಸೆತಗಳಲ್ಲಿ 150 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ (64 ಎಸೆತ) ಹೆಸರಿನಲ್ಲಿದ್ದ 10 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದ್ದರು. ಈ ಸ್ಫೋಟಕ ಇನಿಂಗ್ಸ್ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ‘ಅತ್ಯಂತ ಕಿರಿಯ ಆಟಗಾರ’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಏನಿದು ಬಾಲ ಪುರಸ್ಕಾರ?
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪ್ರಶಸ್ತಿಯು ಮಕ್ಕಳ ಸಾಧನೆಗೆ ನೀಡಲಾಗುವ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಕಲೆ, ಸಂಸ್ಕೃತಿ, ಕ್ರೀಡೆ, ಸಮಾಜ ಸೇವೆ ಅಥವಾ ಶೌರ್ಯ ಮುಂತಾದ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಇದನ್ನೂ ಓದಿ : ಸೆಲ್ಫಿ ಸಿಗದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ನಿಂದನೆ : ‘ನರಕಕ್ಕೆ ಹೋಗು’ ಎಂದ ಅಭಿಮಾನಿ! ವಿಡಿಯೋ ವೈರಲ್



















