ಸಿರಾಕ್ಯೂಸ್ (ಯುಎಸ್ಎ) : ಮೈ ಕೊರೆಯುವ ಚಳಿಯಲ್ಲಿ 8 ತಿಂಗಳಿಂದ ಅನಾಥವಾಗಿ ತನ್ನ ಪತಿಯ ಸಮಾಧಿಯ ಮೇಲೆ ಮಹಿಳೆಯೊಬ್ಬಳು ಮಲಗುತ್ತಿದ್ದಳು ಎಂದರೆ ನಂಬಲು ಸಾಧ್ಯವೇ? ನಂಬಲೇಬೇಕು. ಅಮೆರಿಕದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಮಹಿಳೆಯನ್ನು ಅಚಾನಕ್ಕಾಗಿ ನೋಡಿದ ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಸಣ್ಣ ಮಾನವೀಯತೆ, ಈಗ ಆ ಮಹಿಳೆಯ ಬದುಕನ್ನೇ ಬದಲಿಸಿದೆ. ಸಿರಾಕ್ಯೂಸ್ ನಗರದಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಈ ಕಥೆ ಕೇಳಿ ಹಲವರ ಕಣ್ಣಾಲಿಗಳು ಒದ್ದೆಯಾಗಿವೆ.
ಹಿಮದ ಹಾದಿಯಲ್ಲಿ ಸಿಕ್ಕಿದ ‘ದೇವದೂತ’
ಕಳೆದ ಡಿ.13ರಂದು ಸಿರಾಕ್ಯೂಸ್ ಪೊಲೀಸ್ ಅಧಿಕಾರಿ ಜೇಮಿ ಪಾಸ್ಟೊರೆಲ್ಲೋ ತಮ್ಮ ಗಸ್ತು ವಾಹನದಲ್ಲಿ ಕುಳಿತಿದ್ದಾಗ, ಮಹಿಳೆಯೊಬ್ಬರು ದಿನಸಿ ಚೀಲಗಳನ್ನು ಹೊತ್ತುಕೊಂಡು ಗುಡ್ಡದ ಹಾದಿಯಲ್ಲಿ ಕಷ್ಟಪಟ್ಟು ನಡೆಯುತ್ತಿರುವುದನ್ನು ಗಮನಿಸಿದರು. ತಕ್ಷಣ ವಾಹನ ನಿಲ್ಲಿಸಿ ಅವರಿಗೆ ಸಹಾಯ ಹಸ್ತ ಚಾಚಿದ ಜೇಮಿ, ಆಕೆಯನ್ನು ಎಲ್ಲಿಗೆ ಬಿಡಬೇಕು ಎಂದು ಕೇಳಿದರು. 55 ವರ್ಷದ ರಿಯಾ ಹೋಮ್ಸ್ ತಾವು ಸ್ಮಶಾನಕ್ಕೆ ಹೋಗಬೇಕೆಂದು ತಿಳಿಸಿದರು. ಪ್ರಯಾಣದ ಹಾದಿಯಲ್ಲಿ ರಿಯಾ ತಮ್ಮ 26 ವರ್ಷಗಳ ಸುಂದರ ವೈವಾಹಿಕ ಜೀವನ ಮತ್ತು ದೈವಭಕ್ತಿಯ ಬಗ್ಗೆ ಅಧಿಕಾರಿ ಜೇಮಿ ಜೊತೆ ಮಾತನಾಡಿದ್ದರು. ಅಲ್ಲಿಂದ ಇಳಿಯುವಾಗ ಜೇಮಿ ಜೊತೆ ಒಂದು ಫೋಟೋ ಕೂಡ ತೆಗೆಸಿಕೊಂಡಿದ್ದರು.
ಸಮಾಧಿಯ ಮೇಲೆ 8 ತಿಂಗಳ ವಾಸ |
ಪೊಲೀಸ್ ಇಲಾಖೆಯು ಈ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಾಗ ಅಸಲಿ ಸತ್ಯ ಹೊರಬಿದ್ದಿತು. ಫೋಟೋ ನೋಡಿದ ಸ್ಮಶಾನದ ಉದ್ಯೋಗಿಯೊಬ್ಬರು ಪೊಲೀಸರನ್ನು ಸಂಪರ್ಕಿಸಿ, “ಈ ಮಹಿಳೆ ಕಳೆದ 8 ತಿಂಗಳಿಂದ ತನ್ನ ಪತಿಯ ಸಮಾಧಿಯ ಮೇಲೆಯೇ ಮಲಗುತ್ತಿದ್ದಾಳೆ” ಎಂಬ ಆಘಾತಕಾರಿ ಮಾಹಿತಿ ನೀಡಿದರು. ರಿಯಾ ಅವರ ಪತಿ ರೆವರೆಂಡ್ ಎಡ್ಡಿ ಹೋಮ್ಸ್ 2020ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಪತಿಯ ಸಾವಿನ ಆಘಾತದಿಂದ ಕೆಲಸ ಕಳೆದುಕೊಂಡ ರಿಯಾ, ಮನೆಯಿಂದಲೂ ಹೊರಹಾಕಲ್ಪಟ್ಟಿದ್ದರು. ಅನಾಥರಾದ ಅವರು ತಂಗಲು ಬೇರೆ ದಾರಿಯಿಲ್ಲದೆ, ಪತಿಯ ಸಮಾಧಿಯ ಮೇಲೆ ಒಂದು ಟಾರ್ಪಾಲಿನ್ ಹಾಸಿಕೊಂಡು ಚಳಿಯಲ್ಲೇ ದಿನ ಕಳೆಯುತ್ತಿದ್ದರು. ಯಾರ ಬಳಿಯೂ ಸಹಾಯ ಯಾಚಿಸದೆ, ಸಮೀಪದ ಕಾಲೇಜು ಕ್ಯಾಂಪಸ್ನ ಶೌಚಾಲಯವನ್ನೇ ತಮ್ಮ ದೈನಂದಿನ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು.

ಬದಲಾದ ಬದುಕು |
ರಿಯಾ ಅವರ ಕರುಣಾಜನಕ ಸ್ಥಿತಿ ತಿಳಿದ ಅಧಿಕಾರಿ ಜೇಮಿ ಪಾಸ್ಟೊರೆಲ್ಲೋ ತಕ್ಷಣವೇ ಕಾರ್ಯಪ್ರವೃತ್ತರಾದರು. ಅವರು ರಿಯಾಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದಲ್ಲದೆ, ‘GoFundMe'(ಗೋ ಫಂಡ್ ಮೀ) ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದರು. ಕೇವಲ ಕೆಲವೇ ದಿನಗಳಲ್ಲಿ ರಿಯಾ ಅವರ ನೆರವಿಗೆ ಸುಮಾರು 22 ಲಕ್ಷ ರೂ.ಗೂ ಅಧಿಕ ಹಣ ಹರಿದುಬಂತು. ಇದೀಗ ರಿಯಾ ಅವರು ಸುಸಜ್ಜಿತವಾದ ಪುಟ್ಟ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಸಿರಾಕ್ಯೂಸ್ನಲ್ಲಿ ಈಗ ಮೈನಸ್ ಡಿಗ್ರಿಗಿಂತಲೂ ಕಡಿಮೆ ತಾಪಮಾನವಿದ್ದು, ರಿಯಾ ಈಗ ಬೆಚ್ಚನೆಯ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ಅಂದು ಜೇಮಿ ಅವರು ಕಾರಿನಲ್ಲಿ ಲಿಫ್ಟ್ ನೀಡದಿದ್ದರೆ ಇಂದು ತಾನು ಜೀವಂತವಾಗಿರುತ್ತಿರಲಿಲ್ಲ ಎಂದು ರಿಯಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ | ಹೆಲಿಕಾಪ್ಟರ್ ಮೂಲಕ ಹೈಟೆಕ್ ಸರ್ವೆ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ!



















