ಬೆಂಗಳೂರು : SSLC ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಲಾಗಿದೆ. ತೃತೀಯ ಭಾಷೆಯ ಅಂಕಕ್ಕೆ ಕೊಕ್ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸುದ್ದಿ ನೀಡಿದೆ.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625ರಿಂದ 525 ಇಳಿಕೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ.
ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಈಗ ನಮ್ಮಲ್ಲಿ ಇರುವುದು ತ್ರಿಭಾಷಾ ನೀತಿ. ಎಸ್ಎಸ್ಎಲ್ಸಿಯಲ್ಲಿ ಹಿಂದಿ ಭಾಷೆ ಅಂಕವನ್ನ ಗ್ರೇಡ್ ಎಂದು ಪರಿಗಣಿಸಲಾಗುವುದು. ಎಸ್ಎಸ್ಎಲ್ಸಿಯಲ್ಲಿ ಒಟ್ಟು ಅಂಕಗಳು 525 ಅಂತಾನೇ ಪರಿಗಣಿಸಲಾಗುತ್ತದೆ. ಫಲಿತಾಂಶದಲ್ಲಿ ಹಿಂದಿಯ ಪರೀಕ್ಷೆ ಅಂಕಗಳು ಗ್ರೇಡ್ ಅಂತಾನೇ ಇರುತ್ತೆ. ಹಿಂದಿ ಭಾಷೆಯ ಅಂಕವನ್ನ ಎ.ಬಿ.ಸಿ.ಡಿ ಅಂತ ಗ್ರೇಡ್ನಲ್ಲಿ ಕೊಡಲಾಗುವುದು. ಉಳಿದ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಾಜಾಜಿನಗರದಲ್ಲಿ ರಾಮನವಮಿ ಆಚರಣೆ



















