ಬೆಂಗಳೂರು: ಬಿ.ಟೆಕ್ ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಡಾಬಾದಲ್ಲಿ ಊಟ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ದರೋಡೆ ಮಾಡಿದ್ದ ರೌಡಿ ಶೀಟರ್ ಸೇರಿ ಆರು ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಂಧ್ರಪ್ರದೇಶ ಮೂಲದ ಗೋಪಿಚಂದ್, ತೇಜ್‌ದೀಪ್, ಗಂಗಮ್ಮನಗುಡಿ ರೌಡಿ ಶೀಟರ್ ಶರತ್, ಸಹಚರರಾದ ಮಂಜುನಾಥ್, ಚೇತನ್‌ಗೌಡ, ಚೇತನ್ ಕುಮಾರ್ ಬಂಧಿತ ಆರೋಪಿಗಳು. ಸಿಲಿಕಾನ್ ಸಿಟಿಯ ರಾಜಾನುಕುಂಟೆಯ ಖಾಸಗಿ ವಿಶ್ವವಿದ್ಯಾಲಯದ ಬಿಟೆಕ್ ವಿದ್ಯಾರ್ಥಿ ಇಟಗಲ್‌ಪುರ ನಿವಾಸಿ ವಿಘ್ನೇಶ್(20) ಎಂಬ ವಿದ್ಯಾರ್ಥಿಯ ಮೇಲೆಯೇ ಹಲ್ಲೆ ನಡೆಸಿ, ದರೋಡೆ ಮಾಡಿದ್ದರು.
ವಿಘ್ನೇಶ್ ಆಂಧ್ರಪ್ರದೇಶ ಮೂಲದವನು. ಜೂ.2ರಂದು ಸಹಪಾಠಿಗಳಾದ ಗೋಪಿಚಂದ್ ಮತ್ತು ತೇಜ್‌ದೀಪ್ ರೂಮ್ ಬಳಿ ಬಂದು ಬನ್ನೇರುಘಟ್ಟದ ಬಂದೂಸ್ ಡಾಬಾಗೆ ಊಟಕ್ಕೆ ಹೋಗೋಣ ಎಂದು ಕರೆದಿದ್ದಾರೆ. ಹೀಗಾಗಿ ವಿಘ್ನೇಶ್ ಹಾಗೂ ಆತನ ಸ್ನೇಹಿತ ಗಣೇಶ್ ಒಂದು ಬೈಕ್ ನಲ್ಲಿ ಹಾಗೂ ಗೋಪಿಚಂದ್ ಮತ್ತು ತೇಜ್ ದೀಪ್ ಮತ್ತೊಂದು ವಾಹನದಲ್ಲಿ ಡಾಬಾಗೆ ತೆರಳಿದ್ದಾರೆ. ಊಟ ಮುಗಿದ ಮೇಲೆ ಮರಳಿ ಬರುತ್ತಿದ್ದಾಗ ಡ್ಯಾನಿಶ್ ಫಾರಂ ಹತ್ತಿರ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ವಿಘ್ನೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಅಡ್ಡಗಟ್ಟಿದ್ದಾರೆ.
ಬೈಕ್ ನಲ್ಲಿ ಗಾಂಜಾ ಇರಿಸಿ ನಿಮ್ಮ ಸ್ನೇಹಿತರಾದ ತೇಜ್‌ದೀಪ್ ಮತ್ತು ಗೋಪಿಚಂದ್ ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಬಾ ಅಂತ ಹೇಳು ಎಂದು ಗದರಿಸಿದ್ದಾರೆ. ಗಾಂಜಾ ಪೊಟ್ಟಣವನ್ನು ತೆಗೆದು ವಿಘ್ನೇಶ್ ದ್ವಿಚಕ್ರ ವಾಹನದಲ್ಲಿ ಇರಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ವಿಘ್ನೇಶ್ ಹತ್ತಿರ ಇದ್ದ 20 ಸಾವಿರ ರೂ. ಹಾಗೂ 12 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಂಜಾದ ವಿಡಿಯೋ ಡಿಲೀಡ್ ಮಾಡಬೇಕಾದರೆ, 10 ಲಕ್ಷ ರೂ. ಹಣ ನೀಡಬೇಕು ಎಂದು ಧಮ್ಕಿ ಹಾಕಿದ್ದಾರೆ.
ನಂತರ ವಿಘ್ನೇಶ್ ನ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನವನ್ನು ಅಡಮಾನ ಇರಿಸಿ 50 ಸಾವಿರ ರೂ. ಪಡೆದಿದ್ದಾರೆ. ಉಳಿದ ಹಣ ಎರಡು ದಿನಗಳಲ್ಲಿ ಕೊಡಬೇಕು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ವಿಘ್ನೇಶ್ ದೂರು ದಾಖಲಿಸಿದ್ದು, ಪೊಲೀಸರು 6 ಜನರನ್ನು ಬಂಧಿಸಿದ್ದಾರೆ.
ಬಂಧಿತ ಆರು ಮಂದಿ ಆರೋಪಿಗಳ ಪೈಕಿ ತೇಜ್‌ದೀಪ್ ಮತ್ತು ಗೋಪಿಚಂದ್ ದೂರುದಾರ ವಿಘ್ನೇಶ್ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲೇ ಬಿಟೆಕ್ ಓದುತ್ತಿದ್ದಾರೆ. ವಿಘ್ನೇಶ್ ನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.