ಬಾಗಲಕೋಟೆ: ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಬಸಪ್ಪ ತಳವಾರ(32) ಕೊಲೆಯಾದವ. ಮಹಾನಿಂಗ ಬಿದರಿ(37) ಆರೋಪಿ. ಬಸಪ್ಪ ತಳವಾರ, ಮಹಾನಿಂಗನಿಗೆ 2.5 ಲಕ್ಷ ರೂ. ಸಾಲ ಕೊಡಬೇಕಿತ್ತು ಎಂದು ತಿಳಿದು ಬಂದಿದೆ. ಆದರೆ, ಮರಳಿ ಕೊಟ್ಟಿರಲಿಲ್ಲ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಮಹಾನಿಂಗ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆಮಾಡಿ ದೊಡ್ಡ ಹೈಡ್ರಾಮಾ ಮಾಡಿದ್ದ. ನನ್ನ ಸ್ನೇಹಿತನೂ ಹೋದ ನನ್ನ ಹಣವೂ ಹೋಯಿತು ಎಂದು ಹೆದ್ದಾರಿ ಮೇಲೆನಿಂತು ಕೂಗಾಡಿ, ಕಣ್ಣೀರು ಹಾಕಿದ್ದ ಎನ್ನಲಾಗಿದೆ. ಆನಂತರ ಜಮಖಂಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸಪ್ಪ ತಳವಾರ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜನವಾಡ ಗ್ರಾಮದ ನಿವಾಸಿ. ಕೊಲೆ ಮಾಡಿದ ಮಹಾನಿಂಗ ಬಾಗಲಕೋಟೆ ಜಿಲ್ಲೆ ತೇರದಾಳ ತಾಲ್ಲೂಕಿನ ಹನಗಂಡಿ ಗ್ರಾಮದವನು ಎನ್ನಲಾಗಿದೆ. ಹಿಂದೆ ಮೈಸೂರಲ್ಲಿ ಇಬ್ಬರು ಕೂಲಿ ಕೆಲಸಕ್ಕಿದ್ದರು. ಕಳೆದ ಕೆಲವು ದಿನಗಳ ಹಿಂದೆ ಮಹಾನಿಂಗ ಕುಂಬಾರಹಳ್ಳಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡಿದ್ದ. ಪೆ. 2ರಂದು ಬಸಪ್ಪ ಕೂಡ ಕುಂಬಾರಹಳ್ಳಕ್ಕೆ ಬಂದಿದ್ದ. ಆನಂತರ ಇಬ್ಬರೂ ಹಣದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಕುಡಿದ ಮತ್ತಿನಲ್ಲಿ ಬಸಪ್ಪ ಮಲಗಿದ್ದ ವೇಳೆ ಪೆಟ್ರೋಲ್ ತಂದು ಬಸಪ್ಪನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಮಹಾನಿಂಗ ತಾನು ಕೂಲಿ ಮಾಡಿ ಗಳಿಸಿದ ಹಣವನ್ನು ಬಸಪ್ಪನ ಕೈಗೆ ಕೊಡುತ್ತಿದ್ದ. ಅದು ಎರಡೂವರೆ ಲಕ್ಷ ರೂ. ಆಗಿತ್ತು. ಆ ಹಣ ಮರಳಿ ನೀಡು ಅಂದಿದ್ದಕ್ಕೆ ನಿರಾಕರಿಸಿದ್ದ ಎನ್ನಲಾಗಿದೆ. ಮಹಾನಿಂಗನಿಗೆ ಮದುವೆಯಾಗಿ ಪತ್ನಿ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ.