ನವದೆಹಲಿ: ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ಜೈಲಿನಲ್ಲಿರುವ ಕೈದಿಗಳನ್ನು ಪತ್ತೆಹಚ್ಚಿ, ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಕುರಿತು ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳಿಗೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. “ಯಾವುದೇ ಅಪರಾಧಿ ತನ್ನ ಶಿಕ್ಷಾ ಅವಧಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೆ ಮತ್ತು ಆತ ಬೇರೆ ಯಾವುದೇ ಪ್ರಕರಣದಲ್ಲಿ ಬೇಕಾಗಿಲ್ಲ ಎಂದಿದ್ದರೆ, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ವಿಚಾರದಲ್ಲಿ ಕಳೆದ ತಿಂಗಳು ತಾನೇ ನೀಡಿದ ಆದೇಶವೊಂದನ್ನು ಮತ್ತೊಮ್ಮೆ ನ್ಯಾಯಪೀಠ ನೆನಪಿಸಿತು. 2002ರ ದೆಹಲಿ ಉದ್ಯಮಿ ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿ ಸುಖದೇವ್ ಯಾದವ್ ಅಲಿಯಾಸ್ ಪಹಲ್ವಾನ್ ಸಲ್ಲಿಸಿದ್ದ ಬಿಡುಗಡೆ ಅರ್ಜಿಗೆ ಸಂಬಂಧಿಸಿ ಕಳೆದ ತಿಂಗಳು ಸುಪ್ರೀಂಕೋರ್ಟ್ ಇದೇ ಮಾದರಿಯ ತೀರ್ಪು ನೀಡಿತ್ತು. ಪಹಲ್ವಾನ್‌ಗೆ 20 ವರ್ಷಗಳ ನಿಗದಿತ ಅವಧಿಯ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಈ ಶಿಕ್ಷೆಯು ಮಾರ್ಚ್ 9ರಂದು ಕೊನೆಗೊಂಡಿತ್ತು. ಬಳಿಕ ಆತ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ, ಆತನ 20 ವರ್ಷಗಳ ಜೈಲು ಜೀವನದ ನಡತೆಯನ್ನು ಪರಿಗಣಿಸಿ, ಶಿಕ್ಷೆ ಪರಿಶೀಲನಾ ಮಂಡಳಿ ಆತನ ಬಿಡುಗಡೆಯ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದ ಪಹಲ್ವಾನ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜುಲೈ 29ರಂದು ಆತನನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು.
ತನ್ನ ಆದೇಶವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಸದಸ್ಯ ಕಾರ್ಯದರ್ಶಿಗೆ ತಲುಪಿಸುವಂತೆ ನ್ಯಾಯಾಲಯ ಸೂಚಿಸಿದೆ. ಪ್ರಾಧಿಕಾರವು ಈ ಆದೇಶವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ (DLSAs) ಕಳುಹಿಸಿ, ಅದರ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

















