ಮಂಗಳೂರು: ಇಸ್ರೇಲ್ ಹಾಗೂ ಇರಾನ್ ಮಧ್ಯೆ ಯುದ್ಧ ಭೀಕರತೆ ಪಡೆಯುತ್ತಿದೆ. ಈ ಮಧ್ಯೆ ಇಸ್ರೇಲ್ ನಲ್ಲಿರುವ (Israel) ಕಂಪೆನಿಯೊಂದರ ಹೆಸರನ್ನು ಬಳಸಿಕೊಂಡು ಉದ್ಯೋಗ ನೀಡುವುದಾಗಿ ವಂಚಿಸಿರುವ ಘಟನೆ ನಡೆದಿದೆ.
ಇಸ್ರೇಲ್ ನ ಕಂಪೆನಿಯೊಂದರಲ್ಲಿ ಉದ್ಯೋಗ ನೀಡುವುದಾಗಿ ಪಾಸ್‌ಪೋರ್ಟ್ ಹಾಗೂ ಹಣ ಪಡೆದ ಕೇರಳದ ಏಜೆನ್ಸಿಯೊಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 130 ಜನರು ಸೇರಿದಂತೆ ದೇಶದ ಸಾವಿರಾರು ಮಂದಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಉದ್ಯೋಗಾಕಾಂಕ್ಷಿಗಳು ಇಸ್ರೇಲ್‌ನಲ್ಲಿ ಉದ್ಯೋಗ ಪಡೆಯಲು ಮಂಗಳೂರಿನ ಕನ್ಸಲ್ಟೆನ್ಸಿಯವರಿಗೆ ಪಾಸ್‌ಪೋರ್ಟ್ ನೀಡಿದ್ದರು. ಅವರು ಕೇರಳದ ಏಜೆನ್ಸಿಗೆ ನೀಡಿದ್ದರು. ಕೇರಳದ ಏಜೆನ್ಸಿಯವರು ಇಸ್ರೇಲ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವ ನಕಲಿ ಕಂಪೆನಿಯೊಂದರ ಆಫರ್ ಲೆಟರ್ ನೀಡಿ ವಂಚಿಸಿದ್ದಾರೆ.
ಮಂಗಳೂರಿನ ಕನ್ಸಲ್ಟೆನ್ಸಿಯ ರೋಹಿತ್ ಎಂಬವರು ತಮ್ಮ ಬಳಿ 130 ಮಂದಿ ತಂದುಕೊಟ್ಟಿದ್ದ ಪಾಸ್‌ಪೋರ್ಟ್‌ನ್ನು ಕೇರಳದ ಸ್ಪೇಸ್ ಇಂಟರ್‌ನ್ಯಾಶನಲ್ ಎಂಬ ಏಜೆನ್ಸಿಯವರಿಗೆ ನೀಡಿದ್ದರು. ಆನಂತರ 20 ದಿನಗಳ ನಂತರ ಇಸ್ರೇಲ್‌ನ ಕೊಹೇನ್ ಎಂಪ್ಲಾಯ್‌ಮೆಂಟ್ ಗ್ರೂಪ್ ಕಂಪನಿ ಎಂಬ ಹೆಸರಿನಿಂದ ಆಫರ್ ಲೆಟರ್ ಬಂದಿತ್ತು. ಆ ಆಫರ್ ಲೆಟರ್‌ನ ಬಗ್ಗೆ ಇಸ್ರೇಲ್‌ನಲ್ಲಿರುವ ಅವರ ಗೆಳೆಯನಿಗೆ ತಿಳಿಸಿದ್ದರು. ಅಲ್ಲಿ ಪರಿಶೀಲನೆ ನಡೆಸಿದಾಗ ಆ ಹೆಸರಿನ ಕಂಪನಿ ಅಸ್ತಿತ್ವದಲ್ಲಿ ಇಲ್ಲದಿರುವುದು ಪತ್ತೆಯಾಗಿದೆ.
ಮರಳಿ ಪಾಸ್ ಪೋರ್ಟ್ ಗಳನ್ನು ಕೇಳಿದರೆ, ಬೆದರಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ.