ಪ್ಯಾರಿಸ್ : ಇತ್ತೀಚಿಗಷ್ಟೆ ಅಧಿಕಾರ ಸ್ವೀಕರಿಸಿದ್ದ ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ರಾಜೀನಾಮೆ ನೀಡಿದ್ದು, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಂದು ಲೆಕೋರ್ನು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ರಕ್ಷಣಾ ಸಚಿವರಾಗಿದ್ದ 39 ವರ್ಷದ ಲೆಕೋರ್ನು ಕಳೆದ ಸೆ.9ರಂದು ಫ್ರಾನ್ಸ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸೆಬಾಸ್ಟಿಯನ್ ಲೆಕೋರ್ನು ಹೊಸ ಕ್ಯಾಬಿನೆಟ್ ಘೋಷಣೆ ಮಾಡಿ ಸೋಮವಾರ ಪ್ರಥಮ ಸಭೆ ನಡೆಸಬೇಕಿತ್ತು. ಆದರೆ ಹೊಸ ಕ್ಯಾಬಿನೆಟ್‌ಗೆ ಆಡಳಿತ ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 3 ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ ಏಳು ಪ್ರಧಾನಿಗಳು ರಾಜೀನಾಮೆ ಸಲ್ಲಿಸಿದಂತಾಗಿದೆ.
ರಾಜೀನಾಮೆ ಯಾಕೆ? ಫ್ರಾನ್ಸ್ ಸಂಸತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಸದ್ಯ ಫ್ರಾನ್ಸ್‌ನಲ್ಲಿ ಅಲ್ಪಮತದ ಸರ್ಕಾರವಿದೆ. 2026ರಲ್ಲಿ ಬಜೆಟ್ ಮಂಡಿಸಬೇಕಿದ್ದು, ಅದಕ್ಕೆ ಬಹುಮತದ ಅಂಗೀಕಾರ ಪಡೆಯಬೇಕಿದೆ. ಬಜೆಟ್‌ಗೆ ಅಂಗೀಕಾರ ಪಡೆಯಲು ವಿಫಲವಾದ ಬೆನ್ನಲ್ಲೇ ಸೆಬಾಸ್ಟಿಯನ್ ಲೆಕೋರ್ನು ರಾಜೀನಾಮೆ ಸಲ್ಲಿಸಿದ್ದಾರೆ.