ರಾಯಚೂರು : ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಸಾತನೂರು ಬಳಿ ನಡೆದಿದೆ.
ರಾಯಚೂರಿನ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ದಾಸರಿ ಉಮಾವತಿ (35), ದಾಸರಿ ರತ್ನ (26) ಮಹೇಶ (24) ಮತ್ತು ಶಿವಾನಂದ (28) ಮೃತ ದುರ್ದೈವಿಗಳು. ಸಂಬಂಧಿಕರ ಮದುವೆಗೆ ತೆರಳಿದ್ದವರು ಮಧ್ಯಾಹ್ನ ತುಂಗಭದ್ರಾ ನದಿಗೆ ಸ್ನಾನಕ್ಕೆ ನದಿಗೆ ಇಳಿದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.
ಆಂಧ್ರಪ್ರದೇಶ ಕರ್ನಾಟಕ ಗಡಿ ಭಾಗದ ರಾಜೊಳ್ಳಿಬಂಡಾ ಆಣೆಕಟ್ಟಿನ ಕೊನೆ ಭಾಗದ ಬಳಿ ಈ ಘಟನೆ ನಡೆದಿದೆ. ಆಂಧ್ರದ ಕರ್ನೂಲು ಜಿಲ್ಲೆಯ ಕೊಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಸ್ಥಳೀಯ ಮೀನುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಕೊಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುರ್ಡಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಶಾಲಾ ವಾಹನಕ್ಕೆ ಬಸ್ ಡಿಕ್ಕಿ – 11ಕ್ಕೂ ಹೆಚ್ಚು ಮಕ್ಕಳಿಗೆ ಗಾಯ, ಇಬ್ಬರು ಗಂಭೀರ!


















