ಛಾಪ್ರಾ (ಬಿಹಾರ) : ಬಿಹಾರದ ಛಾಪ್ರಾದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಹಚ್ಚಿದ್ದ ಅಗ್ಗಿಸ್ಟಿಕೆ ಸಾವು-ನೋವುಗಳಿಗೆ ಕಾರಣವಾಗಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದೆ. ಭಗವಾನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಿಕಾ ಕಾಲೋನಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಕುಟುಂಬವು ಮುಚ್ಚಿದ ಕೋಣೆಯಲ್ಲಿ ಮಲಗಿತ್ತು. ಅಲ್ಲಿ ಅಗ್ಗಿಸ್ಟಿಕೆ ಉರಿಯುತ್ತಿತ್ತು. ಕೊಠಡಿ ಮುಚ್ಚಿದ್ದರಿಂದಾಗಿ ಅಗ್ಗಿಸ್ಟಿಕೆಯ ಹೊಗೆ ಕೋಣೆಯನ್ನು ತುಂಬಿತ್ತು. ಇದರಿಂದಾಗಿ ಆಮ್ಲಜನಕದ ಕೊರತೆ ಉಂಟಾಗಿ ಅಲ್ಲಿದ್ದವರಿಗೆ ಪ್ರಜ್ಞೆ ತಪ್ಪಿದೆ.
ಮೃತರಲ್ಲಿ ಮೂವರು ಚಿಕ್ಕ ಮಕ್ಕಳು ಮತ್ತು ವೃದ್ಧ ಮಹಿಳೆ ಸೇರಿದ್ದಾರೆ. ರಾಮ್ ಲಖನ್ ಸಿಂಗ್ ಅವರ ಪತ್ನಿ ಕಮಲಾವತಿ ದೇವಿ (70), ವಿಜಯ್ ಕುಮಾರ್ ಅವರ ಮಗ ತೇಜನ್ಶ್ ಕುಮಾರ್ (3), ಆರ್ಯ ಸಿಂಗ್ ಅವರ ಮಗಳು ಆದ್ಯ ಕುಮಾರಿ (7 ತಿಂಗಳು) ಮತ್ತು ವಿಜಯ್ ಕುಮಾರ್ ಅವರ ಮಗಳು ಗುಡಿಯಾ ಕುಮಾರಿ (9 ತಿಂಗಳು) ಸೇರಿದ್ದಾರೆ. ಅವರು ಮಲಗಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಅನಿಶಾ ಸಿಂಗ್ (25), ಆರ್ಯ ಸಿಂಗ್ (24), ಆರ್ಯ ಕುಮಾರಿ (25) ಮತ್ತು ಸೋನು ಅಲಿಯಾಸ್ ಅಮಿತ್ ಸೇರಿದ್ದಾರೆ. ಅವರು ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಶ್ರೀನಗರದಲ್ಲಿ ಭೀಕರ ಅಪಘಾತ | ಖ್ಯಾತ ಸಿಬಿಐ ವಕೀಲ ಸಾವು!



















