ನವದೆಹಲಿ: ಜಮ್ಮು ಹಾಗೂ ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ (Encounter) ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಭಾರತೀಯ ಸೇನಾ (Indian Army) ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೋಡಾದ (Doda) ದೇಸಾದ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿತ್ತು. ಉಗ್ರರು ಬೆಟ್ಟದ ತುದಿಯಲ್ಲಿ ಅವಿತುಕೊಂಡು ದಾಳಿ ಮಾಡುತ್ತಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ.
ಕಥುವಾದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈಗ ಮತ್ತೊಮ್ಮೆ ಇಂತಹ ಘಟನೆ ನಡೆದಿದೆ. ಅಂದು ದಾಳಿಯಲ್ಲಿ ಐವರು ಸೈನಿಕರು ಗಾಯಗೊಂಡಿದ್ದರು, ಕನಿಷ್ಠ 12 ಸೈನಿಕರನ್ನು ಹೊತ್ತ ಎರಡು ಟ್ರಕ್‌ಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 32 ತಿಂಗಳುಗಳಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ 48 ಯೋಧರು ಹುತಾತ್ಮರಾಗಿದ್ದಾರೆ.