ಪ್ರಯಾಗ್‌ರಾಜ್ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮಂಗಳವಾರ ಮಹಾ ಕುಂಭ ಸ್ನಾನ ಮಾಡಿದರು. ಅಂಬಾನಿ ಕುಟುಂಬದ ನಾಲ್ಕು ತಲೆಮಾರುಗಳು ಸಹ ಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಿತು.
ಮುಕೇಶ್ ಅಂಬಾನಿಯವರ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದಾ, ತಾಯಿ ಕೋಕಿಲಾ ಬೆನ್, ಮಗ-ಸೊಸೆ ಆಕಾಶ್ ಮತ್ತು ಶ್ಲೋಕಾ ಹಾಗೂ ಅನಂತ್ ಮತ್ತು ರಾಧಿಕಾ ಅವರೊಂದಿಗೆ ಪ್ರಯಾಗ್‌ರಾಜ್ನಲ್ಲಿ ಪುಣ್ಯ ಸ್ನಾನ ಮಾಡಿದರು.
ನಂತರ, ಅಂಬಾನಿ ಕುಟುಂಬವು ನಿರಂಜನಿ ಅಖಾಡದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿತು. ಅಂದ ಹಾಗೆ ಇದೇ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಅವರ ಅತ್ತೆ ಪೂರ್ಣಿಮಾ ಬೆನ್ ದಲಾಲ್, ನೀತಾ ಅಂಬಾನಿ ಅವರ ಸೋದರಿ ಮಮತಾ ಬೆನ್ ದಲಾಲ್ ಸಹ ಇದ್ದರು.

ಸಿಹಿ ತಿಂಡಿ ವಿತರಣೆ
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಅಂಬಾನಿ ಕುಟುಂಬವು ಮಹಾಕುಂಭದಲ್ಲಿ ನಿರ್ಮಿಸಲಾದ ಪರಮಾರ್ಥ ನಿಕೇತನ ಆಶ್ರಮವನ್ನು ತಲುಪಿತು. ಆ ಆಶ್ರಮದಲ್ಲಿ ಸ್ವಚ್ಛತಾ ಕಾರ್ಮಿಕರು, ದೋಣಿ ಚಾಲಕರು ಮತ್ತು ಯಾತ್ರಿಕರಿಗೆ ಕುಟುಂಬವು ಸಿಹಿತಿಂಡಿಗಳನ್ನು ವಿತರಿಸಿತು. ಕುಟುಂಬ ಸದಸ್ಯರು ಕೂಡ ಯಾತ್ರಿಕರಿಗೆ ಆಹಾರವನ್ನು ಉಣ ಬಡಿಸಿದರು. ಪರಮಾರ್ಥ ನಿಕೇತನ ಆಶ್ರಮ, ಶಾರದಾ ಪೀಠ ಮಠ ಟ್ರಸ್ಟ್ ದ್ವಾರಕಾ, ಶ್ರೀ ಶಂಕರಾಚಾರ್ಯ ಉತ್ಸವ ಸೇವಾಲಯ ಪ್ರತಿಷ್ಠಾನ, ನಿರಂಜನಿ ಅಖಾಡ ಮತ್ತು ಪ್ರಭು ಪ್ರೇಮಿ ಸಂಘ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಪ್ರಸಿದ್ಧ ಆಧ್ಯಾತ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಕುಂಭಮೇಳದಲ್ಲಿ ಆಹಾರ ಸೇವೆಯನ್ನು ಮಾಡುತ್ತಿದೆ. ಅಂಬಾನಿ ಕುಟುಂಬವು ದೋಣಿ ಚಾಲಕರಿಗೆ ಮತ್ತು ಯಾತ್ರಿಕರ ಸುರಕ್ಷತೆಗಾಗಿ ಲೈಫ್ ಜಾಕೆಟ್‌ಗಳನ್ನು ಸಹ ಒದಗಿಸಿತು.