ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಕೈಗಾರಿಕಾ ಕ್ರಾಂತಿಯ ಮೂಲಕ ಹೆಸರು ಗಳಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್ ವಿನಯ್ ಹೆಗ್ಡೆ ಅವರು ಇಂದು(ಜನವರಿ 1) ಬೆಳಗ್ಗೆ ನಿಧನರಾಗಿದ್ದಾರೆ. 83 ವರ್ಷ ವಯಸ್ಸಾಗಿದ್ದ ವಿನಯ್ ಹೆಗ್ಡೆ ಅವರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಜನವರಿ 1ರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.00 ರವರೆಗೆ ಮಂಗಳೂರಿನ ಶಿವಭಾಗ್‌ನಲ್ಲಿರುವ ಸದಾನಂದ ನಿವಾಸದಲ್ಲಿ ಮತ್ತು ಸಂಜೆ 4.30 ರಿಂದ ಸಂಜೆ 6.00 ರವರೆಗೆ ನಿಟ್ಟೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ವಿನಯ್ ಹೆಗ್ಡೆ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ವಿನಯ್ ಹೆಗ್ಡೆ ಅವರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಅವರ ದ್ವಿತೀಯ ಪುತ್ರ ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸೋದರರಾಗಿದ್ದಾರೆ.
ವಿನಯ್ ಹೆಗ್ಡೆ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಶಿಕ್ಷಣ ತಜ್ಞರಾಗಿದ್ದಾರೆ. ನಿಟ್ಟೆ ಯೂನಿವರ್ಸಿಟಿ ರೂವಾರಿಯಾಗಿದ್ದರು.
ಇದನ್ನೂ ಓದಿ: ‘ಅಕ್ರಮ’ ಶೂರರಿಗೆ ಮಿಡಿಯುವ ಸಿಎಂ ಮನಸ್ಸು ಕನ್ನಡಿಗರ ವಿಷ್ಯದಲ್ಲಿ ಠುಸ್ | ಸರ್ಕಾರದ ವಿರುದ್ಧ N.R. ರಮೇಶ್ ರ್‍ಯಾಶ್!



















