ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಒಪಿಡಿ (ಹೊರರೋಗಿ ವಿಭಾಗ)ಯನ್ನು ಆಮೂಲಾಗ್ರ ಬದಲಾವಣೆಯೊಂದಿಗೆ ನವೀಕರಣಗೊಳಿಸಲಾಗುತ್ತಿದ್ದು, ನವೆಂಬರ್‌ನಲ್ಲಿ ಶಿಲಾನ್ಯಾಸ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವೆನ್‌ಲಾಕ್‌ನ ಆರ್‌ಎಪಿಸಿಸಿ ಸಭಾಂಗಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ದಿನೇಶ್ ಮಾತನಾಡಿದರು.
ವೆನ್ಲಾಕ್ ಒಪಿಡಿ ಸಂಕೀರ್ಣ ನವೀಕರಣಕ್ಕೆ ಸರ್ಕಾರದಿಂದ ಈಗಾಗಲೇ 70 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಆಸ್ಪತ್ರೆಯ ಆಮೂಲಾಗ್ರ ಬದಲಾವಣೆಯೊಂದಿಗೆ ಸುಸಜ್ಜಿತ ರೀತಿಯಲ್ಲಿ ನವೀಕರಣಗೊಳಿಸುವ ಅಗತ್ಯ ರೂಪುರೇಷೆಗಳನ್ನು ಒದಗಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
“ಒಪಿಡಿಯಲ್ಲಿ ಸಂಜೆವರೆಗೂ ವೈದ್ಯರ ಉಪಸ್ಥಿತಿ ಕಡ್ಡಾಯ”
ಒಪಿಡಿ ವಿಭಾಗದಲ್ಲಿ ಮಧ್ಯಾಹ್ನದ ವೇಳೆ ವೈದ್ಯರು ಇರುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದರಿಂದ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ರಕ್ಷಾ ಸಮಿತಿಯ ಸದಸ್ಯರು ಆಕ್ಷೇಪಿಸಿದಾಗ ಸಂಜೆಯವರೆಗೂ ಒಪಿಡಿಯಲ್ಲಿ ವೈದ್ಯರಿರಬೇಕು. ಸರಕಾರಿ ಸೇರಿದಂತೆ ಕೆಎಂಸಿಯಿಂದ ನಿಯೋಜಿಸಲ್ಪಟ್ಟ ವೈದ್ಯರೂ ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ವೈದ್ಯರ ಬಗ್ಗೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಇನ್ನು, ಕೆಎಂಸಿ ವತಿಯಿಂದ ನಿಯೋಜಿಸಲಾದ ವೈದ್ಯರು ಕೆಲಸ ನಿರ್ವಹಿಸದ ಬಗ್ಗೆ ದೂರುಗಳಿದ್ದಲ್ಲಿ ಗಮನಕ್ಕೆ ತರುವಂತೆ ಕೆಎಂಸಿ ಡೀನ್ ಡಾ. ಉನ್ನಿಕೃಷ್ಣನ್ ಬಿ. ಹೇಳಿದರು.
ವೆನ್ಲಾಕ್ ಜಿಲ್ಲಾಸ್ಪತ್ರೆಯ 175ನೆ ವರ್ಷದ ಸಂಭ್ರಮಾಚರಣೆಯ ಉದ್ಘಾಟನೆ ಸೆ. 14ರಂದು ಹಾಗೂ ನ. 9ರಂದು ಸಮಾರೋಪ ಸಮಾರೋಪದೊಂದಿಗೆ ನಡೆಸುವಂತೆ ನಡೆಸಲು ಅನುದಾನ ಒದಗಿಸುವಂತೆ ಸಭೆಯಲ್ಲಿ ಸಚಿವರನ್ನು ಒತ್ತಾಯಿಸಲಾಯಿತು.


















