ಉಡುಪಿ : ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಅನುಕೂಲವಾಗುವಂತೆ ಬಂದರಿನ ವಿಸ್ತರಣೆಗೆ ಯೋಜನೆ ರೂಪಿಸಬೇಕು. ನೂತನ ಹೆಜಮಾಡಿ ಬಂದರಿನಲ್ಲಿ ಮೀನುಗಾರಿಕೆಗೆ ಪೂರಕವಾಗಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಕರಾವಳಿ ಭಾಗಗಳಲ್ಲಿ ಕಡಲ ಕೊರೆತ ಪ್ರತಿ ವರ್ಷವೂ ಉಂಟಾಗುತ್ತಿದೆ.
ಇವುಗಳ ತಡೆಗೆ ಶಾಶ್ವತ ವೈಜ್ಞಾನಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು. ಮಳೆಯಿಂದ ಭತ್ತದ ಬೆಳೆ ಹಾಗೂ ತೋಟಗಾರಿಕೆ ಹಾನಿಗಳನ್ನು ನಿಖರವಾಗಿ ಗುರುತಿಸಿ, ರೈತರಿಗೆ ಪರಿಹಾರ ಒದಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂದೂರಿ ಸೂಚಿಸಿದ್ದಾರೆ.
ಹವಾಮಾನ ಇಲಾಖೆಯಿಂದ ಪ್ರತಿದಿನ ನೀಡುವ ಹವಾಮಾನ ಮುನ್ಸೂಚನೆ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಒದಗಿಸಬೇಕು. ಮೀನುಗಾರಿಕೆ ಚಟುವಟಿಕೆಗಳಿಗೆ ಹೋಗುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್‌ಗಳನ್ನು ಬಳಸುವಂತೆ ಮನವೊಲಿಸಬೇಕು. ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದಲ್ಲಿ ಮೀನುಗಾರಿಕೆಗೆ ಹೋಗದಂತೆ ಎಚ್ಚರವಹಿಸಲು ಮೀನುಗಾರರಿಗೆ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.


















