ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಮೆಕ್ಲಾರೆನ್ ಚಾಲಕ ಆಸ್ಕರ್ ಪಿಯಾಸ್ಟ್ರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ರೇಸ್ ಹಂಗೇರಿಯಾದಲ್ಲಿ ನಡೆದಿತ್ತು. 70 ಲ್ಯಾಪ್ ನ ಈ ಚಾಂಪಿಯನ್ ಶಿಪ್ ನಲ್ಲಿ ಆಸ್ಕರ್ 2ನೇ ಸ್ಥಾನದೊಂದಿಗೆ ರೇಸ್ ನ್ನು ಆರಂಭಿಸಿದ್ದರು. ಆದರೆ, ಮೊದಲ ಸ್ಥಾನದಲ್ಲಿದ್ದ ಅವರದೇ ತಂಡದ ಲ್ಯಾಂಡೋ ನೊರಿಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಪ್ರಿಕ್ಸ್ ಗೆ ಆಸ್ಕರ್ ಪಿಯಾಸ್ಟ್ರಿ ಮುತ್ತಿಕ್ಕಿದ್ದಾರೆ. ಮೊದಲ ಸುತ್ತಿನಲ್ಲೇ ಮುನ್ನಡೆ ಪಡೆದ ಆಸ್ಕರ್ ಪಿಯಾಸ್ಟ್ರಿ ಕೊನೆಯವರೆಗೂ ಅದನ್ನೇ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 1:38:01.989 ಗಂಟೆಯಲ್ಲಿ ರೇಸ್ ಮುಗಿಸುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.
ಇದಕ್ಕೂ ಮುನ್ನ ನಡೆದಿದ್ದ ಬ್ರಿಟಿಷ್ ಗ್ರ್ಯಾಂಡ್ ಪಿಕ್ಸ್ನಲ್ಲಿ ಆಸ್ಕರ್ ಪ್ರಿಯಾಸ್ಟ್ರಿ 4ನೇ ಸ್ಥಾನ ಪಡೆದಿದ್ದರು. ಆದರೆ, ಈ ಬಾರಿ ಮರ್ಸಿಡೀಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್, ರೆಡ್ ಬುಲ್ ಡ್ರೈವರ್ ಮ್ಯಾಕ್ಸ್ ವರ್ಸ್ಟಪ್ಪೆನ್ ಅವರನ್ನು ಹಿಂದಿಕ್ಕಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಬೆಲ್ಜಿಯಂ ಗ್ರ್ಯಾಂಡ್ ಪ್ರಿಕ್ಸ್ ನಿಂದ ಸತತವಾಗಿ ಅಗ್ರಸ್ಥಾನದಲ್ಲೇ ಕಾಣಿಸಿಕೊಳ್ಳುತ್ತಿದ್ದ ರೆಡ್ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್ ಈ ಬಾರಿ 5ನೇ ಸ್ಥಾನ ಪಡೆದಿದ್ದಾರೆ. ಲೂಯಿಸ್ ಹ್ಯಾಮಿಲ್ಟನ್ 3ನೇ ಸ್ಥಾನದೊಂದಿಗೆ ರೇಸ್ ಮುಗಿಸಿದ್ದಾರೆ.
ಹಂಗೇರಿ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಮೆಕ್ಲಾರೆನ್ ಚಾಲಕರಿಬ್ಬರು ಅಗ್ರಸ್ಥಾನಗಳಲ್ಲಿ ಕಾಣಿಸಿಕೊಂಡಿರುವುದು ಭಾರೀ ವಿಶೇಷವಾಗಿದೆ. 23 ವರ್ಷದ ಆಸ್ಕರ್ ಪಿಯಾಸ್ಟ್ರಿ ಅಗ್ರಸ್ಥಾನ ಪಡೆದರೆ, ಮೆಕ್ಲಾರೆನ್ನ ಮತ್ತೊರ್ವ ಚಾಲಕ ಲ್ಯಾಂಡೋ ನೊರಿಸ್ ಎರಡನೇ ಸ್ಥಾನ ಪಡೆದಿದ್ದಾರೆ. ಲೂಯಿಸ್ ಹ್ಯಾಮಿಲ್ಟನ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.