ಹಾಸನ : ರಾಜ್ಯದ ಮುತ್ಸದ್ಧಿ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಅವರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಈ ಮ್ಯೂಸಿಯಂ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಗ್ರಾಮದಲ್ಲಿ ಸ್ಥಾಪನೆಯಾಗಲಿದೆ.
ರೈತನ ಮಗನಾಗಿ ಹುಟ್ಟಿ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೇರಿದ ದೇವೇಗೌಡರ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಭಿಮಾನಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈ ಮಹತ್ವದ ಯೋಜನೆಗೆ ಮುಂದಾಗಿದೆ.
2022ರ ಏಪ್ರಿಲ್‌ನಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ಶೃಂಗೇರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿಗಳು ಶಿಲಾನ್ಯಾಸ ನೆರವೇರಿಸಿದ್ದರು.
ಮ್ಯೂಸಿಯಂ ವಿಶೇಷತೆಗಳು:
ಈ ಮ್ಯೂಸಿಯಂನಲ್ಲಿ ದೇವೇಗೌಡರ ಸಂಪೂರ್ಣ ಜೀವನ ಚರಿತ್ರೆ ಪ್ರದರ್ಶನವಾಗಲಿದೆ. ಪ್ರಧಾನಿಯಾಗಿ ಇದ್ದಾಗ ಅವರಿಗೆ ದೇಶ–ವಿದೇಶಗಳಿಂದ ಬಂದ ಉಡುಗೊರೆಗಳ ಸಂಗ್ರಹ, ಮೊದಲ ಚುನಾವಣೆಯಿಂದ ಇಂದಿನವರೆಗಿನ ರಾಜಕೀಯ ಪಯಣದ ಚಿತ್ರಾವಳಿ, ಮಹತ್ವದ ಘಟನೆಗಳ ಮಾಹಿತಿ, ಅವರ ಒಡನಾಡಿಗಳ ಭಾವಚಿತ್ರಗಳು, ಪ್ರಕಟಿತ ಪುಸ್ತಕಗಳು ಹಾಗೂ ಜೀವನ ಶೈಲಿಯನ್ನು ಬಿಂಬಿಸುವ ವಿಶೇಷ ಪ್ರದರ್ಶನಗಳು ಇಲ್ಲಿ ಇರಲಿವೆ
ಸುಮಾರು ₹5 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಈ ಯೋಜನೆಗೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಅನುದಾನ ನೀಡಿದೆ. ಆಕರ್ಷಕ ಕಟ್ಟಡ, ಸುಂದರ ಉದ್ಯಾನ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೇ ವಿಶೇಷ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಸಾಮಾನ್ಯ ರೈತನ ಮಗನೊಬ್ಬ ಪ್ರಧಾನಿ ಹುದ್ದೆಗೆ ಏರಿದ ಕಥೆಯನ್ನು ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಿ ತಲುಪಿಸುವ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ : ವಯೋಮಿತಿ ಗೊಂದಲದ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್!


















