ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾವು ಜೋರಾಗಿದ್ದು, ಕಾಂಗ್ರೆಸ್ ಗೆ ತಲೆ ಬಿಸಿ ಶುರುವಾಗಿದೆ.
ಟಿಕೆಟ್ ವಂಚಿತ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡಿರುವ ಅಜ್ಜಂಪೀರ್ ಖಾದ್ರಿ ಮತ್ತು ಮಂಜುನಾಥ ಕುನ್ನೂರು ಕೂಡ ನಾಮಪತ್ರ ಸಲ್ಲಿಸಿ, ಕಾಂಗ್ರೆಸ್ ಗೆ ತಲೆನೋವು ಸೃಷ್ಟಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ 13 ನಿಮಿಷ ಬಾಕಿ ಇರುವಾಗ ಖಾದ್ರಿ ಓಡೋಡಿ ಬಂದು ಚುನಾವಣಾಧಿಕಾರಿ ಮಹ್ಮದ್ ಖಿಝರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಮಗ ರಾಜು ಕುನ್ನೂರಗೆ ‘ಕೈ’ ಟಿಕೆಟ್ ನೀಡದಿದ್ದಕ್ಕೆ ಆಕ್ರೋಶಗೊಂಡಿರುವ ಮಂಜುನಾಥ ಕುನ್ನೂರ ಕೂಡ ತಾವೇ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅಜ್ಜಂಪೀರ್ ಖಾದ್ರಿ, ನಾನು ಶಿಗ್ಗಾಂವ್ ಕ್ಷೇತ್ರದ ನಿವಾಸಿ. ಬಿಜೆಪಿ ಭರತ್ ಬೊಮ್ಮಾಯಿ ಹುಬ್ಬಳ್ಳಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀನ್ ಖಾನ್ ಹಾನಗಲ್. ನಾನು ಮಾತ್ರ ಶಿಗ್ಗಾಂವ್ ಕ್ಷೇತ್ರದ ವ್ಯಕ್ತಿ. ನಾನು ನಾಮಪತ್ರ ಹಿಂದೆ ಪಡೆಯಲ್ಲ. ನಾನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡನ್ನೂ ಸೋಲಿಸುತ್ತೇವೆ ಎಂದಿದ್ದಾರೆ.
ಈ ವೇಳೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್ ಅಹಮ್ಮದ್ ಖಾನ್ ಕಸರತ್ತು ನಡೆಸಿದ್ದರು. ಆದರೆ, ಸಚಿವ ಜಮೀರ್ ಅಹಮ್ಮದ್ ಖಾನ್ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿದೆ.