ಚಾಮರಾಜನಗರ: ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna) ಸಾವನ್ನಪ್ಪಿದ ಶೋಕದಲ್ಲಿ ರಾಜ್ಯದ ರಾಜಕೀಯ ರಂಗ ಇದೆ. ಆದರೆ, ಇದರ ಮಧ್ಯೆ ಮತ್ತೋರ್ವ ನಾಯಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕೊಳ್ಳೇಗಾಲ (Kollegala) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಜಯಣ್ಣ(S Jayanna) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಜ್ಯ ಉಗ್ರಾಣ ನಿಗಮದ (Warehousing Corporation) ಅಧ್ಯಕ್ಷರಾಗಿದ್ದ ಎಸ್. ಜಯಣ್ಣ ಮಂಗಳವಾರ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.
ಜಯಣ್ಣ ಅವರು 1994 ರಲ್ಲಿ ಜನತಾದಳ ಹಾಗು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೊಳ್ಳೇಗಾಲ ಶಾಸಕರಾಗಿ ಆಯ್ಕೆಯಾಗಿದ್ದರು. ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಹೀಗಾಗಿ ಜಯಣ್ಣ ಅವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಜಯಣ್ಣ ಅವರು ಹೊಸ ಮನೆ ನಿರ್ಮಿಸಿದ್ದರು. ಅದಕ್ಕಾಗಿ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಲು ಮೈಸೂರಿಗೆ ತೆರಳುತ್ತಿದ್ದರು. ಆಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಜಯಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 72 ವರ್ಷಗಳಾಗಿದ್ದವು. ಹೀಗಾಗಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಕೊಳ್ಳೇಗಾಲದ ಜಯಣ್ಣ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಆಗ ನೂತನ ಮನೆಯ ನಾಮಫಲಕವನ್ನೂ ಕೂಡ ಅನಾವರಣ ಮಾಡಲಾಗಿತ್ತು. ನೂತನ ಮನೆಯ ಗೃಹ ಪ್ರವೇಶಕ್ಕೆ ಆಹ್ವಾನ ಪತ್ರಿಕೆ ಕೊಡಲು ಹೋಗುತ್ತಿದ್ದ ವೇಳೆಯೇ ಅವರಿಗೆ ಹೃದಯಾಘಾತವಾಗಿದೆ.