ಬೆಂಗಳೂರು: ಮುಡಾ ನೀವೇಶನ ಹಂಚಿಕೆ ಹಗರಣ (Muda Scam) ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ- ಜೆಡಿಎಸ್ ದೋಸ್ತಿ ಇದೇ ವಿಷಯ ಮುಂದಿಟ್ಟುಕೊಂಡು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದೆ.
ಸಿಎಂ ರಾಜೀನಾಮೆಗಾಗಿ ಇಂದಿನಿಂದ ಪಾದಯಾತ್ರೆ ಆರಂಭವಾಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಆರಂಭಿಸಿವೆ. ಉದ್ಘಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ (Preetham gowda) ಕಾಣಸಿಕೊಂಡಿಲ್ಲ. ಕುಮಾರಸ್ವಾಮಿ ಅವರ ಅವಾಜ್ ಗೆ ಬಿಜೆಪಿ ಭಯ ಪಟ್ಟಿರಬಹುದು ಎಂದೇ ಎಲ್ಲರೂ ಈಗ ಮಾತನಾಡಿಕೊಳ್ಳುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಪ್ರೀತಂಗೌಡ ಕಾಣಿಸಿಕೊಂಡಿದ್ದಕ್ಕೆ ಕುಮಾರಸ್ವಾಮಿ ಗರಂ ಆಗಿದ್ದರು. ನಮ್ಮ ಕುಟುಂಬಕ್ಕೆ ವಿಷ ಹಾಕಿದವರೊಂದಿಗೆ ವೇದಿಕೆ ಹಂಚಿಕೊಳ್ಳಬೇಕೆ? ಎಂದು ಪ್ರಶ್ನಿಸಿ, ನಾವು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ನಂತರ ಬಿಜೆಪಿ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರೀತಂಗೌಡ ಭಾಗವಹಿಸಿದ್ದರೆ, ಜೆಡಿಎಸ್ ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಆದರೆ, ಈಗ ಪ್ರೀತಂಗೌಡ ಕಾಣಿಸದಿರುವುದಕ್ಕೆ ಇದು ಸತ್ಯ ಎನ್ನಲಾಗುತ್ತಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಅನ್ನು ಪ್ರೀತಂ ಗೌಡ ತಮ್ಮ ಬೆಂಬಲಿಗರ ಮೂಲಕ ಹಂಚಿದ್ದಾರೆ. ದೇವೇಗೌಡರ ಕುಟುಂಬಕ್ಕೆ ವಿಷ ಹಾಕಲು ಹೊರಟಿದ್ದವರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಈಗ ಪ್ರೀತಂಗೌಡ ಮಾತ್ರ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಇದನ್ನು ನೋಡಿದರೆ, ಕುಮಾರಸ್ವಾಮಿ ಷರತ್ತು ವಿಧಿಸಿದ್ದು ಸತ್ಯ ಎನ್ನಲಾಗುತ್ತಿದೆ.