ಬೆಂಗಳೂರು: ಅತ್ಯಾಚಾರ, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಸದ್ಯ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಾಮೀನು ರದ್ಧತಿ ಕುರಿತು ಎಸ್ ಐಟಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿ ಮಾಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅಪಹರಿಸಿದ ಆರೋಪವಿತ್ತು. ರೇವಣ್ಣ ಅವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ರೇವಣ್ಣ ಜಾಮೀನು ಪಡೆದು ಹೊರಗಿದ್ದರು. ಹೀಗಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಎಸ್ ಐಟಿ ಅರ್ಜಿ ಸಲ್ಲಿಸಿತ್ತು.
ಈ ಕುರಿತು ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್, ಇಂದು ತೀರ್ಪು ಪ್ರಕಟಿಸಿದೆ. ಶಾಸಕ ಎಚ್‌ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ಆದೇಶ ಎತ್ತಿ ಹಿಡಿದ ಹೈಕೋರ್ಟ್. ಎಸ್ ಐಟಿ ಅರ್ಜಿ ವಜಾ ಮಾಡಿದೆ.
ಅಲ್ಲದೇ, ಈ ವೇಳೆ ಅಪಹರಣ ಪ್ರಕರಣದ ಇನ್ನಿತರ ಆರೋಪಿಗಳ ಜಾಮೀನು ಅರ್ಜಿ ಕೂಡ ವಿಚಾರಣೆ ನಡೆಯಿತು. ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಎಚ್ ಕೆ ಸುಜಯ್, ಎಚ್ ಎನ್ ಮಧು, ಎಸ್ ಟಿ ಕೀರ್ತಿ, ಎಚ್ ಡಿ ಮಾಯು ಗೌಡ, ಕೆ ಎ ರಾಜಗೋಪಾಲ್ ಸೇರಿದಂತೆ ಎಲ್ಲರಿಗೂ ಜಾಮೀನು ಮಂಜೂರು ಮಾಡಿದೆ.