ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇವರಾಜ್ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.
ಡಿ.3 ರಂದು ದೇವರಾಜ್(67) ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಆಚರಣೆಗೂ ಮೊದಲು ಅವರು ಚಾಮುಂಡಿ ತಾಯಿಯ ದರ್ಶನಕ್ಕೆಂದು ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್‌ವಿ ದೇವರಾಜ್ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಇಂದು ಬೆಳಗ್ಗೆ ಅಂಬುಲೆನ್ಸ್ ಮೂಲಕ ಕಲಾಸಿಪಾಳ್ಯ ಬಳಿಯ ಮನೆಗೆ ತರಲಾಯಿತು. ಇಂದು ಬೆಳಗ್ಗೆ 10 ಗಂಟೆಯ ನಂತರ ಜೆಸಿ ರಸ್ತೆಯ ಪಕ್ಷದ ಕಚೇರಿ ಬಳಿ ಸಾರ್ವಜನಿಕ ವ್ಯವಸ್ಥೆಗೆ ಸಿದ್ದತೆ ನಡೆಸಲಾಗಿದೆ. ನಾಳೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂದೇ ಕನಕಪುರ ಸೋಮನಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
ರಾಜಕೀಯ ಜೀವನ
1957ರ ಡಿಸೆಂಬರ್ 3ರಂದು ಆರ್.ವಿ.ದೇವರಾಜ್ ಜನಿಸಿದ್ದರು. ಶಿಕ್ಷಣದ ಬಳಿಕ 1989-99ರಲ್ಲಿ ಚಾಮರಾಜಪೇಟೆ ಶಾಸಕರಾಗಿದ್ದರು. 2000ರಿಂದ ಅಕ್ಟೋಬರ್ 2007ರವರೆಗೆ ಕೆಎಸ್ಆರ್ಟಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ಧಾರೆ.

2008ರಲ್ಲಿ ಕ್ಷೇತ್ರ ಮರುವಿಂಗಡನೆಯಾದಾಗ ಎಸ್ಎಂ ಕೃಷ್ಣಗೆ ಬೆಂಗಳೂರಲ್ಲಿ ಸ್ಪರ್ಧಿಸಲು ಕ್ಷೇತ್ರ ಬಿಟ್ಟುಕೊಡುತ್ತಾರೆ. ಚಾಮರಾಜಪೇಟೆ ಕ್ಷೇತ್ರ ಆ ಸಮಯದಲ್ಲಿ ಕಾಂಗ್ರೆಸ್ಗೆ ಪೂರಕವಾಗಿತ್ತು. ಎಸ್.ಕೃಷ್ಣ ಸಿಎಂ ಆಗಿದ್ದಾಗ ಆರ್.ವಿ ದೇವರಾಜ್ ಆಪ್ತರಾಗಿದ್ದರು. ಬಳಿಕ ಚಿಕ್ಕಪೇಟೆ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಚಾಮರಾಜಪೇಟೆ ಕ್ಷೇತ್ರದ ಕ್ಷೇತ್ರ ಪುನರ್ವಿಂಗಡಣೆ ನಂತರ ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಳಿಕ 2016ರಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ
ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ಅಗಲಿಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಈ ಕುರಿತಾಗಿ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಚಿಕ್ಕಪೇಟೆ ಮಾಜಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀ ಆರ್.ವಿ.ದೇವರಾಜ್ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜಕೀಯ ಮತ್ತು ಸಮಾಜಸೇವೆ ಮೂಲಕ ಚಿಕ್ಕಪೇಟೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದಾಗಿ ರಾಜ್ಯ ರಾಜಕಾರಣ ಮತ್ತು ಚಿಕ್ಕಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಂತಾಪ ಸೂಚಿಸಿದ್ದಾರೆ.



















