ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ವಿರೋಧಿಗಳಿಗೆ ಹಾನಿ ಮಾಡುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಜನತಾ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸಾರಥ್ಯದ ಕೇಂದ್ರದ ಎನ್ ಡಿಎ ಸರ್ಕಾರ, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಬಿಜೆಪಿಯ ಈ ರೀತಿಯ ನೀತಿಗಳು ಆರೆಸ್ಸೆಸ್ ಗೆ ಸಮ್ಮತವೇ ಎಂದು ಗುಡುಗಿದ್ದಾರೆ.
ಈ ವೇಳೆ ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 5 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಬಿಜೆಪಿಯ ನಿವೃತ್ತಿಯ ವಯಸ್ಸಿನ ನಿಯಮ ಪ್ರಧಾನಿ ಮೋದಿ ಅವರಿಗೆ ಅನ್ವಯ ಆಗೋದಿಲ್ಲವೇ? ಈ ನಿಯಮ ಕೇವಲ ಎಲ್. ಕೆ. ಅಡ್ವಾಣಿ ಅವರಿಗೆ ಮಾತ್ರ ಅನ್ವಯವೇ? ಬಿಜೆಪಿ ನಾಯಕರು ವಿರೋಧ ಪಕ್ಷದ ಕೆಲವು ನಾಯಕರನ್ನು ಭ್ರಷ್ಟರು ಅಂತಾರೆ. ಆದರೆ, ಕೆಲವು ದಿನಗಳ ನಂತರ ತಮ್ಮ ಪಕ್ಷಕ್ಕೆ ಆಹ್ವಾನ ಮಾಡುತ್ತಾರೆ. ಇದು ನಿಮಗೆ ಸಮ್ಮತವೇ? ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಬಿಜೆಪಿಗೆ ಆರೆಸ್ಸೆಸ್ ಬೇಕಿಲ್ಲ ಅಂದಿದ್ದರು. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಬೇಕಿಲ್ಲವೇ? ಈ ಕುರಿತು ಉತ್ತರಿಸುವಂತೆ ಪ್ರಶ್ನೆ ಮಾಡಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಜೈಲುಪಾಲಾಗಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಈಗ ತಮ್ಮ ಸ್ಥಾನಕ್ಕೆ ರಾಜೀನಾನೆ ನೀಡಿರುವ ಅವರು, ಅತಿಶಿ ಅವರನ್ನು ಸಿಎಂ ಆಗಿ ಮಾಡಿದ್ದಾರೆ. ಈಗ ಬಿಜೆಪಿ ವಿರುದ್ಧ ಗುಡುಗಿದ್ದಾರೆ.