ಮಂಡ್ಯ: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನರಾಗಿದ್ದು, ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಬಂದಿದೆ.
ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆಯಲಿದೆ. ಎಸ್.ಎಂ. ಕೃಷ್ಣಗೆ ಇಷ್ಟವಾದ ಜಾಗದಲ್ಲಿಯೇ, ಅಂದರೆ ಕಾಫಿಡೇ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಹಲವಾರು ಸಂಬಂಧಿಕರು ವಿದೇಶದಲ್ಲಿ ಇರುವುದರಿಂದಾಗಿ ಅವರು ಬರುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ. ಹೀಗಾಗಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಹೀಗಾಗಿ ಮದ್ದೂರಿನ ಸೋಮನಹಳ್ಳಿಯಲ್ಲಿರುವ ಕಾಫಿ ಡೇ ಆವರಣದಲ್ಲಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಎಸ್.ಎಂ. ಕೃಷ್ಣ ಅವರು ಸೋಮನಹಲ್ಳಿಯಲ್ಲಿ ಮನೆ ನಿರ್ಮಿಸಿದ್ದರು. ಇದು ಅವರ ಇಷ್ಟದ ಸ್ಥಳ, ಮನೆಯೂ ಆಗಿತ್ತು. ಆದರೆ, ಬೆಂಗಳೂರು ಸೇರಿದ ಮೇಲೆ ಅವರ ಇಷ್ಟದ ಆ ಮನೆ ಖಾಲಿ ಇತ್ತು. ನಂತರದಲ್ಲಿ ಅವರು ಆ ಮನೆಯನ್ನು ಅಳಿಯ ಸಿದ್ದಾರ್ಥ್ ಅವರ ಕಾಫಿ ಡೇಗೆ ನೀಡಿದ್ದರು. ಮಂಡ್ಯಕ್ಕೆ ಬಂದಾಗಲೆಲ್ಲ ಕಾಫೀ ಡೇಯಲ್ಲಿ ಕಾಲ ಕಳೆಯುತ್ತಿದ್ದರು. ಹೀಗಾಗಿ ಅವರ ಅಂತ್ಯ ಸಂಸ್ಕಾರವನ್ನು ಇಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.
ಮಾಜಿ ಸಿಎಂ ಎಸ್ಎಂ ಕೃಷ್ಣಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿರುವ ಅವರು ಹುಟ್ಟಿದ ಮನೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಸಂಬಂಧಿಕರು ಎಸ್.ಎಂ. ಕೃಷ್ಣ ಫೋಟೋಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.