ಬೆಂಗಳೂರು: ರೈತರಿಂದ ಕ್ರಯಕ್ಕೆ ಪಡೆದ ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ ಪ್ರಕರಣ ಸಂಬಂಧ ಬಿಜೆಪಿ (BJP) ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಅಶ್ವತ್ಥ ನಾರಾಯಣ, ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಸರ್ವೆ ನಂಬರ್ 100/2ರಲ್ಲಿನ ರೈತರ 4 ಎಕರೆ 30 ಗುಂಟೆ ಕೃಷಿ ಜಮೀನನ್ನು ಕ್ರಯಕ್ಕೆ ಪಡೆದಿದ್ದರು. ನಂತರ ಆ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಹಲವರಿಗೆ ಮಾರಿದ್ದರು.
ಅಶ್ವತ್ಥ ನಾರಾಯಣ ಅವರಿಂದ ನಿವೇಶನ ಖರೀದಿಸಿ ವಂಚನೆಗೆ ಒಳಗಾಗಿದ್ದ ಮೈಸೂರಿನ ವೈದ್ಯೆ ಡಾ.ಕಾವ್ಯಶ್ರೀ ಅವರು ದೂರು ದಾಖಲಿಸಿದ್ದರು. ಅಶ್ವತ್ಥ ನಾರಾಯಣ ಅವರು ಆ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಲೇಔಟ್ಗೆ ಸಂಬಂಧಪಟ್ಟ ಪ್ರಾಧಿಕಾರವು ಅನುಮೋದನೆ ನೀಡಿರಲಿಲ್ಲ. ಅಶ್ವತ್ಥ ನಾರಾಯಣ ಅವರು ಕಾವ್ಯಶ್ರೀ ಅವರಿಗೆ ಮಾರಿದ್ದ ನಿವೇಶನದ ವಿಸ್ತೀರ್ಣದಲ್ಲೂ ವಂಚಿಸಿದ್ದರು.
ಕಾವ್ಯಶ್ರೀ ಅವರ ದೂರಿನ ವಿಚಾರಣೆ ನಡೆಸಿದ ರಾಜ್ಯ ಭೂಕಬಳಿಕೆ ನ್ಯಾಯಾಲಯವು ಅಶ್ವತ್ಥ ನಾರಾಯಣ ಅವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಕಾವ್ಯಶ್ರೀ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
ಈ ತೀರ್ಪು ಭೂಮಿ ಸಂಬಂಧಿತ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಕಾನೂನು ವಲಯದಲ್ಲಿ ಚರ್ಚೆಯಾಗುತ್ತಿದೆ. ಅಶ್ವತ್ಥ್ ನಾರಾಯಣರು ಮಾಜಿ ಶಾಸಕರೂ ಆಗಿದ್ದು, ಈಗ ಈ ಪ್ರಕರಣದಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಉಡುಪಿ | ಕಾಂಗ್ರೆಸ್ ಮುಖಂಡ ದಿವಾಕರ್ ಶೆಟ್ಟಿ ಮನೆಯಲ್ಲಿ ಕಳ್ಳತನ



















