ಚಾಮರಾಜನಗರ : ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ. ಸಣ್ಣ ಹೈದ(56) ಮೃತ ಅರಣ್ಯ ಸಿಬ್ಬಂದಿ. ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
ಚಾಮರಾಜನಗರದಲ್ಲಿ ದಿನ ಕಳೆದಂತೆ ಹುಲಿಗಳ ಆರ್ಭಟ ಮಿತಿಮೀರಿದೆ. ಇತ್ತೀಚೆಗೆ ಚಾಮರಾಜನಗರದ ನಂಜೆದೇವನಪುರದಲ್ಲಿ 5 ಹುಲಿಗಳು ಜಮೀನಿನಲ್ಲಿ ಓಡಾಟ ನಡೆಸಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ನ ಸಿಬ್ಬಂದಿ ಅದೆಷ್ಟೂ ತಡಕಾಡಿದರು ಒಂದು ವ್ಯಾಘ್ರ ಸಹ ಇನ್ನು ಸೆರೆ ಹಿಡಿಯುವುದಕ್ಕೆ ಆಗುತ್ತಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಗಡಿ ನಾಡು ಚಾಮರಾಜನಗರದಲ್ಲಿ ಫಾರೆಸ್ಟ್ ವಾಚರ್ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
56 ವರ್ಷದ ಸಣ್ಣ ಹೈದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಮರಳಹಳ್ಳದ ಕಳ್ಳಬೇಟೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ದಿನ ನಿತ್ಯ ಈ ಮರಳಹಳ್ಳ ಕ್ಯಾಂಪ್ ಸುತ್ತಮುತ್ತ ಬೀಟ್ ಹಾಕುವುದು, ಯಾರಾದರೂ ಕಾಡುಗಳ್ಳರು ಸಂಚರಿಸಿದ್ದಾರೆ, ಬೇಟೆ ನಡೆಸಿದ್ದಾರಾ ಎಂದು ಪತ್ತೆ ಹಚ್ಚುವುದರ ಜೊತೆ ಪ್ರಾಣಿಗಳ ಓಡಾಟದ ಮೇಲು ಇವರು ಕಣ್ಣಿಡುತ್ತಿದ್ದರು.
ದಿನ ನಿತ್ಯ ಬೀಟ್ಗೆ ಹೋಗುವ ಹಾಗೆ ತನ್ನ ಕ್ಯಾಂಪ್ನ 4 ಮಂದಿ ಜೊತೆ ಇಂದು ಮಧ್ಯಾಹ್ನ ಸಣ್ಣಹೈದ ಬೀಟ್ ಗೆ ಹೋಗಿದ್ದರು. ಹುಲ್ಲು ಬೀಜಗಳನ್ನ ಆಯುವ ಕೆಲಸ ಮಾಡ್ತಿರುವ ವೇಳೆ ಹಠಾತ್ತನೆ ಹುಲಿವೊಂದು ಸಣ್ಣ ಹೈದನ ಮೇಲೆ ದಾಳಿ ನಡೆಸಿದೆ ತಕ್ಷಣವೇ ಅಲರ್ಟ್ ಅದ ಜೊತೆಗಿದ್ದ ಸಿಬ್ಬಂದಿ ಕೂಗಿಕೊಂಡು ಪರಿಣಾಮ ಹುಲಿ ಪರಾರಿಯಾಗಿದೆ, ಆದರೆ, ಸಣ್ಣ ಹೈದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಸ್ಥಳಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಎಫ್ ಹಾಗೂ ಮುಖ್ಯಸ್ಥ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಒಟ್ಟಿನಲ್ಲಿ ಹುಲಿ ದಾಳಿಗಳು ಗಡಿ ನಾಡು ಚಾಮರಾಜನಗರದಲ್ಲಿ ಮುಂದುವರೆದಿದ್ದು, ಜನ ಅಷ್ಟೇ ಅಲ್ಲ ಅರಣ್ಯ ಸಿಬ್ಬಂದಿ ಕೂಡ ಆತಂಕ ಪಡುವಂತಾಗಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆಗೂ ಮುನ್ನ ದೆಹಲಿಯಲ್ಲಿ ‘ಆಪರೇಷನ್ ಆಘಾತ್’ : 500ಕ್ಕೂ ಹೆಚ್ಚು ಮಂದಿ ಬಂಧನ, ಭಾರಿ ಪ್ರಮಾಣದ ಮದ್ಯ, ಶಸ್ತ್ರಾಸ್ತ್ರ ಜಪ್ತಿ



















