ಮಂಗಳೂರು | ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲೂ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಇದೀಗ ಜೈನ ಕಾಶಿ ಮೂಡುಬಿದಿರೆಯ ಪಣಪಿಲದಲ್ಲಿ ನಡೆದ 16ನೇ ವರ್ಷದ ಜಯ-ವಿಜಯ ಕಂಬಳದಲ್ಲಿ ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಹೌದು.. ಸುಮಾರು 15 ಮಂದಿ ವಿದೇಶಿಗರು ಕಂಬಳ ಕ್ರೀಡೆಯಲ್ಲಿ ಪ್ರೇಕ್ಷಕರಾಗಿ ಕುತೂಹಲಕರ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಕರಾವಳಿಯ ಈ ವಿಶಿಷ್ಟ ಜಾನಪದ ಕ್ರೀಡೆಯನ್ನು ಕಂಡು ವಿದೇಶಿ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದೇಶಿ ತಂಡದಲ್ಲಿ ಆಸ್ಟ್ರೇಲಿಯಾದ ಆರು ಮಂದಿ ಮತ್ತು ಫ್ರಾನ್ಸ್‌ನ ನಾಲ್ಕು ಮಂದಿ ಮಹಿಳಾ ಪ್ರವಾಸಿಗರಿದ್ದರು.
ವಿದೇಶಿ ಪ್ರವಾಸಿಗರು ಉತ್ಸಾಹದಿಂದ ಕೋಣಗಳ ಓಟವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮತ್ತು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಕೋಣಗಳಿಗೆ ವಿಶ್ರಾಂತಿ ನೀಡುವ ಸ್ಥಳಗಳಿಗೂ (ಟೆಂಟ್)ಅವರು ಭೇಟಿ ನೀಡಿ, ಕೋಣಗಳ ಆರೈಕೆ ಮತ್ತು ಪಳಗಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡು ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಜಯ-ವಿಜಯ ಕಂಬಳ ಸಮಿತಿಯು ವಿದೇಶಿ ಅತಿಥಿಗಳನ್ನು ಸ್ವಾಗತಿಸಿ, ಸಾಂಪ್ರದಾಯಿಕವಾಗಿ ಮುಂಡಾಸು ತೊಡಿಸಿ, ಶಾಲು ಹಾಕಿ ಗೌರವಿಸಿದೆ.
ಇದನ್ನೂ ಓದಿ : ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.23, 24ರಂದು ವಿದ್ಯುತ್ ವ್ಯತ್ಯಯ!



















