ಯಾದಗಿರಿ : ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಪೋಟೋ ಅಪ್ಲೋಡ್ ಮಾಡಿದಕ್ಕೆ ಅನ್ಯಕೋಮಿನ ಪುಂಡರು ತಾಯಿ, ಮಗನಿಗೆ ಥಳಿಸಿದ ಘಟನೆ ಯಾದಗಿರಿ ಗುರುಮಠಕಲ್ ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ನಡೆದಿದೆ.
ಶಿವಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವ ಬಗ್ಗೆ ಗ್ರಾಮದಲ್ಲಿ ಕೇಸರಿ ಬಾವುಟಗಳನ್ನು ಹಾಕಲಾಗಿತ್ತು. ಗ್ರಾಮದಲ್ಲಿ ಹಾಕಿದ್ದ ಕೇಸರಿ ಧ್ವಜಗಳ ಫೋಟೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ.
ಕೇಸರಿ ಧ್ವಜ ಅಳವಡಿಕೆ ಮಾಡಿದ ಪೋಟೋಗಳು ಮಸೀದಿ ಮೇಲೆ ಇಟ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿದ ಹಿನ್ನಲೆಯಲ್ಲಿ ತಪ್ಪಾಗಿ ಅರ್ಥೈಸಿಕೊಂಡ 7 ಮಂದಿ ಯುವಕರು ಪೋಟೋ ಸ್ಟೇಟಸ್ ಹಾಕಿದ್ದ ರಮೇಶ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಗನಿಗೆ ಯಾಕೆ ಹೊಡೆದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ತಾಯಿ ನಾಗಮ್ಮ ಎಂಬಾಕೆಯ ಮೇಲೂ ಯುವಕರ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ.
ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ಮಧ್ಯರಾತ್ರಿಯೇ ಶಿವ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಗ್ರಾಮದ ನಡುರಸ್ತೆಯಲ್ಲಿ ಶಿವ, ಪಾರ್ವತಿ ಮತ್ತು ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದು, ಕೂಡಲೇ ಹಲ್ಲೆ ಮಾಡಿದವರು ಕ್ಷಮೆ ಕೊರಬೇಕು. ಹಲ್ಲೆ ಮಾಡಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಹಲ್ಲೆಗೊಳಗಾದ ನಾಗಮ್ಮ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮುಲಾಂಗ, ರಿಯಾಜ್, ಖಾಜಾ, ಖಲೀಲ್, ಆಸೀಫ್, ಖಲೀಂ, ಸಮೀರ್ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಜಿತ್ ಪವಾರ್ ಕೊನೆಯ ಮಾತುಗಳೇನು? ವಿಮಾನ ಪತನಕ್ಕೆ 9 ನಿಮಿಷ ಮೊದಲು ನಡೆಸಿದ್ದ ಸಂಭಾಷಣೆಯ ಆಡಿಯೋ ರಿಲೀಸ್!



















