ಬೆಂಗಳೂರು: ನಟ ದರ್ಶನ್ ಸಿನಿಮಾ ಕರಿಯರ್ ನಲ್ಲಿ ಅದ್ಭುತವಾಗಿ ನಟಿಸಿರುವ ’ನಮ್ಮ ಪ್ರೀತಿಯ ರಾಮು’ ಚಿತ್ರವು 2003ರಲ್ಲಿ ಬಿಡುಗಡೆಗೊಂಡು ಸಾಕಷ್ಟು ಪ್ರಶಂಸೆಗೆ ಕಾರಣವಾಗಿತ್ತು. ಈಗ ದರ್ಶನ್ ಹುಟ್ಟು ಹಬ್ಬದಂದು ಮತ್ತೊಮ್ಮೆ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಈ ಚಿತ್ರಕ್ಕೆ ’ಅಮೇರಿಕಾ ಅಮೇರಿಕಾ’ ನಿರ್ಮಾಣ ಮಾಡಿದ್ದ ಜಿ.ನಂದಕುಮಾರ್ ಬಂಡವಾಳ ಹೂಡಿದ್ದು, ಸಂಜಯ್-ವಿಜಯ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ದರ್ಶನ್ ಹುಟ್ಟು ಹಬ್ಬ ಫೆ. 16ರಂದು ಇದೆ. ಈ ಹಿನ್ನಲೆಯಲ್ಲಿ ಫೆಬ್ರವರಿ 14ರಂದು 150 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲಕ್ಕೆ ವಿತರಕ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ನಟನ ಬರ್ತ್ ಡೇ ದಿನದಂದು ಮಾಲ್ ಗಳಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿನಿಮಾವು ಹೊಸ ತಂತ್ರಜ್ಘಾನದೊಂದಿಗೆ ಡಿಜಿಟೆಲ್ ಫಾರ್ಮೆಟ್ ನಲ್ಲಿ 5.1 ಸೌಂಡ್ ನೊಂದಿಗೆ ಸಿದ್ದಗೊಂಡಿರುವುದು ವಿಶೇಷ. ಹೀಗಾಗಿ ಇದು ನೋಡುಗರಿಗೆ ಅದರಲ್ಲೂ ಅಭಿಮಾನಿಗಳಿಗೆ ಹೊಸ ರೀತಿಯ ಅನುಭವ ನೀಡುತ್ತದೆ. ನವ್ಯ ನಟರಾಜನ್ ನಾಯಕಿಯಾಗಿದ್ದಾರೆ. ಉಳಿದಂತೆ ದೊಡ್ಡಣ್ಣ, ಉಮಾಶ್ರೀ, ಕರಿಬಸವಯ್ಯ, ಪವಿತ್ರಾಲೋಕೇಶ್, ರಮೇಶ್ ಪಂಡಿತ್, ಹಂಸವಿಜೇತ, ಮಾಸ್ಟರ್ ಆದರ್ಶ್‌ರಾಮೆಗೌಡ, ಶ್ಯಾಂಯಾದವ್, ನಂದಿನಿ ಸೇರಿದಂತೆ ಹಲವರು ನಟಿಸಿದ್ದಾರೆ.
ಚಿತ್ರದ ಆರು ಹಾಡುಗಳ ಪೈಕಿ ಐದಕ್ಕೆ ಕೆ.ಕಲ್ಯಾಣ್ ಮತ್ತು ಒಂದು ಗೀತೆಗೆ ಕೃಷ್ಣಪ್ರಿಯ ಅವರ ಸಾಹಿತ್ಯವಿದೆ. ಗ್ರೇಟ್ ಲೆಜೆಂಡ್ ಇಳಯರಾಜ ಮನಮಿಡಿಯುವ ಸಂಗೀತ ಸಂಯೋಜಿಸಿರುವುದು ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿತ್ತು. ಛಾಯಾಗ್ರಹಣ ರಮೇಶ್ ಬಾಬು, ಸಂಕಲನ ಗಿರೀಶ್ ಕುಮಾರ್.ಕೆ ಅವರದ್ದಾಗಿದೆ. ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಕರಿಘಟ್ಟ ಸೇರಿದಂತೆ ಹಲವು ತಾಣಗಳಲ್ಲಿ ನಡೆದಿತ್ತು.