ಬಡತನ ಜಗತ್ತಿನಲ್ಲಿ ಇಲ್ಲ. ಈಗ ಎಲ್ಲರ ತಟ್ಟೆಯಲ್ಲೂ ಹೊಟ್ಟೆ ತುಂಬುವಷ್ಟು ಆಹಾರ ಇದೆ ಎಂದೇ ಎಲ್ಲ ದೇಶಗಳ ನಾಯಕರು ಹೇಳುತ್ತಾರೆ. ಆದರೆ, ಜಗತ್ತಿನಲ್ಲಿ ಇತ್ತೀಚೆಗೆ ಆಹಾರ ಬೆಲೆ ಸೂಚ್ಯಂಕ ಏರಿಕೆಯಾಗದ್ದು, ಆತಂಕಕ್ಕೆ ಕಾರಣವಾಗುತ್ತಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜಾಗತಿಕ ಆಹಾರ ಬೆಲೆ ಸೂಚ್ಯಂಕವನ್ನು ಪ್ರಕಟಿಸಿದೆ. ಸೆಪ್ಟೆಂಬರ್‌ನಲ್ಲಿ ಈ ಸೂಚ್ಯಂಕವು 124.9 ಅಂಶಗಳಿತ್ತು. ಈ ಸೂಚ್ಯಂಕ ಈಗ ಅಕೋಟ್ಬರ್ ನಲ್ಲಿ 127.4 ಅಂಶಕ್ಕೆ ಏರಿಕೆಯಾಗಿದೆ. 18 ತಿಂಗಳ ನಂತರ ಈಗ ಗರಿಷ್ಠ ಮಟ್ಟಕ್ಕೆ ಸೂಚ್ಯಂಕ ಏರಿಕೆಯಾಗಿದೆ.
ಅಡುಗೆ ಎಣ್ಣೆ ಬೆಲೆ ಶೇ. 7ರಷ್ಟು ಏರಿಕೆಯಾಗಿರುವುದು ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಮಾಂಸದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ.
ಹಲವು ದೇಶಗಳಲ್ಲಿ ಪ್ರತಿಕೂಲ ಹವಾಮಾನ ಸ್ಥಿತಿ, ಉತ್ತರ ಗೋಳಾರ್ಧದಲ್ಲಿ ಭಾರೀ ಮಳೆಯಾಗುತ್ತಿರುವುದು, ಬ್ರೆಜಿಲ್ ನಲ್ಲಿ ಶುಷ್ಕ ಹವಾಮಾನದಿಂದ ಕೃಷಿ ಬಿಕ್ಕಟ್ಟು ಉಂಟಾಗಿರುವುದು, ಆಹಾರ ಉತ್ಪನ್ನಗಳ ಇಳುವರಿ ಕುಸಿತವಾಗಿರುವುದು ಸೇರಿದಂತೆ ಹಣದುಬ್ಬರಏರಿಕೆಯಾಗುತ್ತಿರುವುದು, ಆಹಾರ ಉತ್ಪನ್ನ ಪೂರೈಕೆಯ ಕೊರತೆಯಾಗುತ್ತಿರುವುದು ಇದಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಆಹಾರ ಬೆಲೆ ಸೂಚ್ಯಂಕ ಏರಿಕೆಯ ಹಾದಿ ಹಿಡಿದಿದೆ.
ಧಾನ್ಯಗಳು, ಸಕ್ಕರೆ, ಮಾಂಸ, ಡೈರಿ ಮತ್ತು ತೈಲಗಳ ಬೆಲೆ ಏರಿಕೆಯಾಗುತ್ತಿವೆ. ಸದ್ಯದ ಸ್ಥಿತಿಯಲ್ಲಿ ಜಗತ್ತಿನ ಬರೋಬ್ಬರಿ 45 ದೇಶಗಳಿಗೆ ಬಾಹ್ಯ ನೆರವಿನ ಅವಶ್ಯಕತೆ ಉಂಟಾಗಿದೆ. ಐದು ದೇಶಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಎಫ್‌ಎಒ ವರದಿ ಹೇಳಿದೆ.
ಆಫ್ರಿಕಾದ 33 ದೇಶಗಳು, ಏಷ್ಯಾದ 9, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ನ ಎರಡು ಹಾಗೂ ಯುರೋಪ್ ನ ಒಂದು ರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ರಾಷ್ಟ್ರಗಳಲ್ಲಿ ಏಕದಳ ಧಾನ್ಯಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೆಲವೆಡೆ ಆಮದು ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಆಹಾರ ಸೂಚ್ಯಂಕ ಬೆಲೆ ಹೆಚ್ಚಾಗಿದ್ದು, ಇದು ಜಗತ್ತಿನ ಆತಂಕಕ್ಕೆ ಕಾರಣವಾಗುತ್ತಿದೆ.