ನವದೆಹಲಿ: ಜಿಎಸ್ಟಿ ಮಂಡಳಿಯು ಜಿಎಸ್ಟಿ ಕಡಿತ ಮಾಡಿದರೂ ದೇಶದ ಪ್ರಮುಖ ಗ್ರಾಹಕ ಬಳಕೆ ವಸ್ತುಗಳ (ಎಫ್ಎಂಸಿಜಿ) ಕಂಪನಿಗಳು, ಜನಪ್ರಿಯ ಕಡಿಮೆ ದರದ ಉತ್ಪನ್ನಗಳಾದ 5 ರೂ.ಗಳ ಬಿಸ್ಕಟ್, 10 ರೂ.ಗಳ ಸಾಬೂನು, 20 ರೂ.ಗಳ ಟೂತ್‌ಪೇಸ್ಟ್ ಪ್ಯಾಕ್‌ಗಳ ಎಂಆರ್‌ಪಿ(MRP) ಕಡಿತ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸಿವೆ.
ಈ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡಿದರೆ, 20ರೂ. ಇರುವುದು 18 ರೂ. ಎಂದೂ, 10 ರೂ. ಇರುವುದು 9 ರೂ. ಎಂದೂ ಬದಲಾಗುವುದರಿಂದ ಗ್ರಾಹಕರು ಗೊಂದಲಕ್ಕೀಡಾಗುತ್ತಾರೆ. ಹೀಗಾಗಿ, ದರ ಕಡಿತ ಮಾಡುವ ಬದಲು ನಾವು ಅಷ್ಟೇ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಉತ್ಪನ್ನ ನೀಡಲು ಸಿದ್ಧವಿದ್ದೇವೆ. ಉದಾಹರಣೆಗೆ, 20 ರೂ. ಬಿಸ್ಕಟ್ ಪ್ಯಾಕ್‌ನಲ್ಲಿ ಈಗ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಬಿಸ್ಕಟ್ ಸೇರಿಸುತ್ತೇವೆ ಎಂದು ಕಂಪನಿಗಳು ಹೇಳಿವೆ.
ಈ ಕ್ರಮವು ಗ್ರಾಹಕರ ಖರೀದಿ ಪ್ರಭಾವಕ್ಕೆ ಹಾನಿ ಉಂಟುಮಾಡದೇ ಜಿಎಸ್ಟಿ ಲಾಭವನ್ನೂ ಅವರಿಗೆ ವರ್ಗಾಯಿಸುತ್ತದೆ ಎಂದೂ ಕಂಪನಿಗಳು ತಮ್ಮ ವಾದವನ್ನು ಸಮರ್ಥಿಸಿಕೊಂಡಿವೆ. ಬಿಕಾಜಿ ಫುಡ್ಸ್ ಸಿಎಫ್‌ಒ ರಿಷಬ್ ಜೈನ್ ಮತ್ತು ಡಾಬರ್ ಸಿಇಒ ಮೋಹಿತ್ ಮಾಲೋತ್ರಾ ಕೂಡ ಇದು ಗ್ರಾಹಕರಿಗೆ ಲಾಭದ ಆಯ್ದ ಮಾರ್ಗವಾಗಲಿದೆ ಎಂದಿದ್ದಾರೆ.
ಬಹುತೇಕ ದೈನಂದಿನ ಬಳಕೆಯ ವಸ್ತುಗಳ ಜಿಎಸ್ಟಿ ಈಗ ಶೇ.5ಕ್ಕೆ ಇಳಿಕೆಯಾಗಿದೆ. ಈ ಹಿಂದೆ ಬಿಸ್ಕಟ್‌ಗಳು ಮತ್ತು ಇಂತಹ ಇತರೆ ಆಹಾರ ಸಾಮಗ್ರಿಗಳು ಶೇ.18ರ ಜಿಎಸ್ಟಿ ವ್ಯಾಪ್ತಿಯಲ್ಲಿದ್ದವು. ಕೇಂದ್ರ ಸರ್ಕಾರವು ಜಿಎಸ್ಟಿ ಕಡಿತದ ಲಾಭವನ್ನು ಕಂಪನಿಗಳಿಗೆ ಜನರಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದು, ಈ ಬಗ್ಗೆ ನಿಗಾವನ್ನೂ ವಹಿಸಿದೆ.
ನಿರ್ವಹಣಾತ್ಮಕ ದೃಷ್ಟಿಯಿಂದ, ಹಳೆಯ ಎಂಆರ್‌ಪಿ ಇದ್ದ ಸ್ಟಾಕ್‌ಗಳಿಗೆ ಸ್ಕ್ರ್ಯಾಚ್ ಸ್ಟಿಕ್ಕರ್ ಮೂಲಕ ಕಡಿತ ದರ ಅನ್ವಯಿಸಿ ಮಾರಾಟ ಮಾಡಬಹುದು. ಹೊಸ ಪ್ಯಾಕ್‌ಗಳಿಗೇ ಪರಿಷ್ಕೃತ ದರ ಹೊಂದಿರುವ ಎಂಆರ್‌ಪಿ ಹಾಕಬಹುದು ಎಂದು ಹೇಳಲಾಗುತ್ತಿದೆ.



















