ನವದೆಹಲಿ: ಕೇವಲ 150 ಗ್ರಾಂ ತೂಕದ ಪುಟಾಣಿ ಹಕ್ಕಿಯೊಂದು, ದಿನಕ್ಕೆ ಸುಮಾರು 1,000 ಕಿಲೋಮೀಟರ್‌ಗಳ ಅದ್ಭುತ ಹಾರಾಟ ನಡೆಸಿ, ವಿಜ್ಞಾನಿಗಳನ್ನೇ ಬೆರಗುಗೊಳಿಸಿದೆ. ಈ ಪುಟ್ಟ ಹಕ್ಕಿಯ ಹೆಸರು ‘ಅಪಾಮಾಂಗ್’. ಇದು ‘ಅಮುರ್ ಫಾಲ್ಕನ್’ ಎಂಬ ಅಪರೂಪದ ವಲಸೆ ಹಕ್ಕಿಯಾಗಿದೆ.
ಭಾರತೀಯ ವನ್ಯಜೀವಿ ಸಂಸ್ಥೆಯು ‘ಮಣಿಪುರ ಅಮುರ್ ಫಾಲ್ಕನ್ ಟ್ರ್ಯಾಕಿಂಗ್ ಪ್ರಾಜೆಕ್ಟ್’ (ಹಂತ 2) ಅಡಿಯಲ್ಲಿ, ನವೆಂಬರ್ 11 ರಂದು ಮೂರು ಅಮುರ್ ಫಾಲ್ಕನ್‌ಗಳಿಗೆ ಸ್ಯಾಟಲೈಟ್ ಟ್ಯಾಗ್ ಅಳವಡಿಸಲಾಗಿತ್ತು. ಅವುಗಳೆಂದರೆ-ಅಪಾಮಾಂಗ್ (ವಯಸ್ಕ ಗಂಡು), ಅಲಾಂಗ್ (ಯುವ ಹೆಣ್ಣು), ಮತ್ತು ಅಹು (ವಯಸ್ಕ ಹೆಣ್ಣು).
ಟ್ಯಾಗ್ ಮಾಡಿದ ಕೆಲವೇ ದಿನಗಳಲ್ಲಿ, ಅಪಾಮಾಂಗ್ ತನ್ನ ಅದ್ಭುತ ಹಾರಾಟದ ಪ್ರದರ್ಶನ ನೀಡಿದೆ. ಕೇವಲ 76 ಗಂಟೆಗಳಲ್ಲಿ 3,100 ಕಿಲೋಮೀಟರ್ ದೂರವನ್ನು ನಿಲ್ಲದೆ ಕ್ರಮಿಸಿದೆ. ಮಧ್ಯ ಭಾರತವನ್ನು ದಾಟಿ, ಗುಜರಾತ್ ಅನ್ನು ಹಾದು, ಅರಬ್ಬೀ ಸಮುದ್ರದ ಮೇಲೆ ತನ್ನ ಪ್ರಯಾಣ ಮುಂದುವರಿಸಿದೆ. ಅನುಕೂಲಕರ ಗಾಳಿಯ ನೆರವಿನಿಂದ, ಈ ಹಕ್ಕಿ ಗ್ರಹದ ಅತ್ಯಂತ ವೇಗದ ವಲಸೆ ಹಕ್ಕಿಗಳ ಸಾಲಿಗೆ ಸೇರಿದೆ.

ಮುಂದಿದೆ ನಿಜವಾದ ಸವಾಲು
ಅಪಾಮಾಂಗ್, ಅಲಾಂಗ್, ಮತ್ತು ಅಹು ಈಗ ತಮ್ಮ ವಲಸೆಯ ಅತ್ಯಂತ ಅಪಾಯಕಾರಿ ಹಂತವನ್ನು ಪ್ರವೇಶಿಸಿವೆ. ಭಾರತದಿಂದ ಸೋಮಾಲಿಯಾಗೆ ಸುಮಾರು 6,000 ಕಿಲೋಮೀಟರ್ ದೂರವನ್ನು ಅರಬ್ಬೀ ಸಮುದ್ರದ ಮೇಲೆ ನಿಲ್ಲದೆ ಹಾರಬೇಕಿದೆ. ಈ ಸುದೀರ್ಘ ಹಾರಾಟದಲ್ಲಿ ವಿಶ್ರಾಂತಿ, ಆಹಾರ ಅಥವಾ ನೀರಿಗೂ ಅವಕಾಶವಿಲ್ಲ. ಕೆಲವೇ ಕೆಲವು ವಲಸೆ ಪ್ರಭೇದಗಳು ಮಾತ್ರ ಇಂತಹ ನಿರಂತರ ಹಾರಾಟವನ್ನು ಸಾಧಿಸುತ್ತವೆ ಮತ್ತು ಇಂಥ ಸಾಹಸಕ್ಕೆ ಹೊರಟಿರುವ ಅಮುರ್ ಫಾಲ್ಕನ್ ಅವುಗಳಲ್ಲಿ ಅತ್ಯಂತ ಚಿಕ್ಕದೂ ಹೌದು.

ಮಣಿಪುರದಿಂದ ಆಫ್ರಿಕಾದವರೆಗೆ
ಈ ಹಕ್ಕಿಗಳ ವಲಸೆ ಪಯಣ ಮಣಿಪುರದ ದಟ್ಟ ಕಾಡುಗಳಿಂದ ಪ್ರಾರಂಭವಾಗಿದೆ. ಪೂರ್ವ ಏಷ್ಯಾದಿಂದ ದಕ್ಷಿಣ ಆಫ್ರಿಕಾಗೆ ಸಾಗುವ ಈ ಹಕ್ಕಿಗಳಿಗೆ ಮಣಿಪುರ ಒಂದು ಪ್ರಮುಖ ತಂಗುದಾಣವಾಗಿದೆ. ಹಿಂದೆ ಬೇಟೆಯಿಂದಾಗಿ ಅಳಿವಿನಂಚಿನಲ್ಲಿದ್ದ ಈ ಹಕ್ಕಿಗಳನ್ನು, ಮಣಿಪುರದ ಗ್ರಾಮಸ್ಥರು ಸಂರಕ್ಷಿಸಿ, ಅವುಗಳ ಪಾಲಕರಾಗಿದ್ದಾರೆ. ಈ ಸಂರಕ್ಷಣಾ ಕಥೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಸದ್ಯ ಈ ಮೂರು ಹಕ್ಕಿಗಳು ಅರಬ್ಬೀ ಸಮುದ್ರದ ಮೇಲೆ ಹಾರುತ್ತಿದ್ದು, ವಿಜ್ಞಾನಿಗಳು ಆತಂಕ ಮತ್ತು ವಿಸ್ಮಯದಿಂದ ಅವುಗಳ ಪ್ರಯಾಣವನ್ನು ಗಮನಿಸುತ್ತಿದ್ದಾರೆ. ಅವುಗಳ ಯಶಸ್ವಿ ಹಾರಾಟವು ಈ ಪುಟ್ಟ ಜೀವಿಗಳ ಅದ್ಭುತ ನೇವಿಗೇಷನ್ ಸಾಮರ್ಥ್ಯ ಮತ್ತು ವಿಕಾಸದ ಗಟ್ಟಿತನವನ್ನು ಮತ್ತೊಮ್ಮೆ ಜಗತ್ತಿಗೆ ಸಾರಲಿದೆ.
ಇದನ್ನೂ ಓದಿ: ಶಬರಿಮಲೆ ಯಾತ್ರೆ ಆರಂಭ | ಭಕ್ತರಿಗೆ ಬ್ರೈನ್ ಈಟಿಂಗ್ ಅಮಿಬಾ ಆತಂಕ


















