ಬೆಂಗಳೂರು: ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದಲ್ಲಿ ಭಾರೀ ದುರಂತವೇ ಸಂಭವಿಸಿದೆ. ಹೀಗಾಗಿ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಿ ಅಗತ್ಯ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ(Siddaramaiah) ಸೂಚಿಸಿದ್ದಾರೆ.
ರಾಜ್ಯದಲ್ಲೆಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂ ಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದ್ದಾರೆ.
ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು, ಈ ಕುರಿತು ಸಹ ಜಿಲ್ಲಾಧಿಕಾರಿಗಳು ಎಚ್ಚರ ವಹಿಸುವಂತೆ ಹೇಳಿದ್ದಾರೆ.
ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದಾರೆ.