ಬೆಂಗಳೂರು: ಯುಗಾದಿ ಹಬ್ಬದ ದಿನ ರಾಜ್ಯದಲ್ಲಿ ಜಲ ಗಂಡಾಂತರ ಎದುರಾಗಿದೆ.
ಹೊಸ ವರ್ಷ ಯುಗಾದಿ (Ugadi) ಹಬ್ಬದಂದು ರಾಜ್ಯದಲ್ಲಿ ಜಲ ಗಂಡಾಂತರ ಆವರಿಸಿದೆ. ರಾಜ್ಯದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಹಬ್ಬದ ದಿನವೇ ನೀರು ಪಾಲಾಗಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ತೆರಳಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿ ಶರಣ್ (13) ಮೃತ ಬಾಲಕ. ಬಾಲಕ ಶರಣ್ ಸ್ನೇಹಿತರ ಜೊತೆ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಶರಣ್ ಮೃತಪಟ್ಟಿದ್ದಾನೆ. ಟಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ (Bagalkot) ತಾಲೂಕಿನ ಸೀತಿಮನಿ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರು ಪಾಲಾಗಿರುವ ಘಟನೆ ನಡೆದಿದೆ. ಸೋಮಶೇಖರ್ ದೇವರಮನಿ (15), ಪರನಗೌಡ ಬೀಳಗಿ (17) ಮತ್ತು ಮಲ್ಲಪ್ಪ ಬಗಲಿ (16) ಜಲ ಸಮಾಧಿಯಾಗಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿಯ ತುಂಗಾ ನದಿಯಲ್ಲಿ ಮುಳುಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಜಿಗಳಗೊಡು ಗ್ರಾಮದ ನಿವಾಸಿ ಕಿರಣ್ (20) ಸಾವನ್ನಪ್ಪಿದ್ದಾನೆ. ಕಿರಣ್ ಮೂವರು ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದನು. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಕಿರಣ್ ಸಾವನ್ನಪ್ಪಿದ್ದಾನೆ.