ಬೆಂಗಳೂರು | ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ವಾಯುನೆಲೆಗಳನ್ನು ಮುಚ್ಚಲಾಗಿದೆ. ಇದರ ನೇರ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬೀರಿದ್ದು, ಇಂದು ಸಹ ಸರಣಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ 09 ವಿಮಾನಗಳು ಹಾಗೂ ವಿದೇಶದಿಂದ ಆಗಮಿಸಬೇಕಿದ್ದ 15 ವಿಮಾನಗಳು ಸೇರಿದಂತೆ ಒಟ್ಟು 24 ವಿಮಾನಗಳ ಸಂಚಾರವನ್ನು ಇಂದು ರದ್ದುಗೊಳಿಸಲಾಗಿದೆ.
ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಖತಾರ್ ಏರ್ವೇಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ಮರು ಬುಕ್ಕಿಂಗ್ ಅಥವಾ ಪೂರ್ಣ ಹಣ ವಾಪಸ್ ಪಡೆಯಲು ಏರ್‌ಲೈನ್ಸ್‌ಗಳು ಅವಕಾಶ ಕಲ್ಪಿಸಿವೆ.
ಯುದ್ಧದ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಅನಿಶ್ಚಿತವಾಗಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಗತಿಯನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳದೆ ವಿಮಾನ ನಿಲ್ದಾಣಕ್ಕೆ ಬರಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ.
ಇದನ್ನೂ ಓದಿ : ಹೋರಿ ಟ್ರೋಲ್ ವಿಚಾರಕ್ಕೆ ಗಲಾಟೆ | ಯುವಕನಿಗೆ ಮನಬಂದಂತೆ ಥಳಿಸಿದ ಕಿಡಿಗೇಡಿಗಳು


















