ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯವೊಂದು ನಡೆದಿದೆ.
ಬಿಹಾರ (Bihar) ಮೂಲದ ಕಾಮುಕನೊಬ್ಬ ಈ ಕೃತ್ಯ ಎಸಗಿದ್ದಾನೆ. ನಗರದ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ ಕುಟುಂಬಸ್ಥರು ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಆಟವಾಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಪತ್ತೆಯಾಗಿದ್ದ ಬಾಲಕಿಗಾಗಿ ಪೋಷಕರು ಹುಡುಕಾಟ ನಡೆಸಿದಾಗ ಅದ್ಯಾಪಕ ನಗರದಲ್ಲಿನ ಖಾಲಿ ಜಾಗದಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸ್ಥಳೀಯರ ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, “ಕೊಪ್ಪಳ ಮೂಲದ ಕುಟುಂಬ ಮನೆಗೆಲಸ, ಪೇಂಟಿಂಗ್ ಕೆಲಸ ಮಾಡುವ ಸಲುವಾಗಿ ಹುಬ್ಬಳ್ಳಿಯಲ್ಲಿ ವಾಸಿಸುತ್ತಿತ್ತು. ಬಾಲಕಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ಅವರು ಕೆಲಸಕ್ಕೆ ಹೋದಾಗ ತಮ್ಮೊಂದಿಗೆ ಮಗು ಕರೆದುಕೊಂಡು ಹೋಗಿದ್ದಾರೆ. ಆದರೆ, ಅವರು ಕೆಲಸಕ್ಕೆ ಒಳಗೆ ಹೋಗಿದ್ದ ವೇಳೆ ಮಗು ಹೊರಗೆ ಆಟವಾಡುತ್ತಿದ್ದಾಗ ಮಗುವನ್ನು ಅಪರಿಚತ ವ್ಯಕ್ತಿ ಎತ್ತಿಕೊಂಡು ಹೋಗಿದ್ದಾನೆ. ಮಗುವಿನ ದೇಹ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿದೆ. ಆರೋಪಿ ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ. ಈ ಕುರಿತು ಮಗುವಿನ ಪೋಷಕರು ದೂರು ಸಲ್ಲಿಸಿದ್ದಾರೆ. ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.