ನೆಲಮಂಗಲ: ಗಂಡ, ಹೆಂಡತಿ ಜಗಳವಾಡಿ, ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಜಿ.ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯರಾಮ್(34), ಮಹಾಲಕ್ಷ್ಮಿ (28) ಜಗಳ ಮಾಡಿಕೊಂಡ ದಂಪತಿಗಳು. ಸಿರಿ( 5 ) ಕೊಲೆಯಾದ ಮಗು.
8 ವರ್ಷದ ಹಿಂದೆ ಜಯರಾಮ್ ಹಾಗೂ ಮಹಾಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷಗಳಿಂದ ಕೆಲಸವಿಲ್ಲದೆ ಮನೆಯಲ್ಲೆ ಇದ್ದ ಜಯರಾಮ್ ಕುಡಿತಕ್ಕೆ ದಾಸನಾಗಿದ್ದ. ಆಗಾಗ ಗಂಡ, ಹೆಂಡತಿ ನಡುವೆ ಜಗಳವಾಗುತ್ತಿದ್ದು, ಅದು ತಾರಕಕ್ಕೇರಿ ಮಹಾಲಕ್ಷ್ಮಿ. ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ವೇಳೆ ಮಗುವಿನ ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡಿದ್ದಾಳೆ.

ಕೂಡಲೇ ಮನೆಯವರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಮಹಾಲಕ್ಷ್ಮಿಯನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ತೀವ್ರ ನಿಗಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎ.ಎಸ್ ಪಿ ಡಾ.ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ಪತಿ ಜಯರಾಮ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















