ವಿಜಯಪುರ: ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.
ವಕ್ಫ್ ಅವಾಂತರದಿಂದಾಗಿ ಸಾಕಷ್ಟು ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ರಾತ್ರೋ ರಾತ್ರಿ ಪಹಣಿಯಲ್ಲಿದ್ದ ಕರ್ನಾಟಕ ವಕ್ಫ್ ಬೋರ್ಡ್ ನಮೂದು ಮಾಡಿದ್ದನ್ನು ಕಂದಾಯ ಇಲಾಖೆಯ ಅಧಿಕಾರಿಗಳು ರದ್ದು ಮಾಡಿದ್ದಾರೆ. ಈ ಮೂಲಕ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ರೈತರ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ್ ಆಸ್ತಿ ಎಂದು ಇದ್ದದ್ದನ್ನು ಕಂದಾಯ ಅಧಿಕಾರಿಗಳು ಬದಲಾವಣೆ ಮಾಡಿದ್ದಾರೆ. ಅ. 9ರಂದು ತೆನೆಹಳ್ಳಿ ಗ್ರಾಮದ ರೈತ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ನೋಟೀಸ್ ನೀಡದೇ ಪಹಣಿಯ ಕಾಲಂ ನಂಬರ್ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಿದ್ದರು. ಈಗ ಯಮನಪ್ಪ ಕೆಂಗನಾಳ ಜಮೀನಿನಲ್ಲಿದ್ದ ಕರ್ನಾಟಕ ವಕ್ಫ್ ಬೋರ್ಡ್ ಎಂದು ಅಧಿಕಾರಿಗಳು ಕೈಬಿಟ್ಟಿದ್ದಾರೆ. ಹೀಗಾಗಿ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇಂಡಿ ತಾಲ್ಲೂಕಿನ 41 ರೈತರ ಜಮೀನಿಗಳ ನೋಟಿಸ್ ನೀಡದೇ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ತಹಶೀಲ್ದಾರ್ ನಮೂದಿಸಿದ್ದು, ಈಗ ವಕ್ಪ್ ಬೋರ್ಡ್ ಎಂಬುದನ್ನು ತೆಗೆಯಲು ಮನವಿ ಮಾಡಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹೀಗಾಗಿ ಸಮಸ್ಯೆಗಳು ಬಗೆಹರಿಯುವ ಲಕ್ಷಣ ಕಾಣುತ್ತಿವೆ.