ಪುಣೆ: ಕೋವಿಡ್-19, ಎಚ್ಎಂಪಿವಿ, ಹಂದಿಜ್ವರದಂಥ ಸೋಂಕುಗಳು ಜನರ ನಿದ್ದೆಗೆಡಿಸಿದ ಬೆನ್ನಲ್ಲೇ ಈಗ ಹೊಸ ಮಾದರಿಯ ಜಿಬಿಎಸ್ ಸೋಂಕು (Guillain-Barre Syndrome) ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ. ಸೋಮವಾರ ಮಹಾರಾಷ್ಟ್ರದ ಸೋಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಈ ಸೋಂಕಿಗೆ ತುತ್ತಾದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಭಾರತದಲ್ಲಿ ಗುಲ್ಲೆನ್-ಬರ್ರೆ ಸಿಂಡ್ರೋಮ್‌ನ (ಜಿಬಿಎಸ್) ಮೊದಲ ಸಾವಿನ ಪ್ರಕರಣ ಇದಾಗಿದೆ. ಇದಲ್ಲದೇ ಪುಣೆಯಲ್ಲಿ ಜಿಬಿಎಸ್ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿದ್ದು, ಆರೋಗ್ಯ ಅಧಿಕಾರಿಗಳು ಹಾಗೂ ನಾಗರಿಕರನ್ನು ಭೀತಿಗೆ ನೂಕಿದೆ.
ಮೃತ ವ್ಯಕ್ತಿ 40ರ ಆಸುಪಾಸಿನವರಾಗಿದ್ದು, ಅತಿಸಾರದಿಂದ ಬಳಲುತ್ತಿದ್ದರು. ಕೆಮ್ಮು ಮತ್ತು ಶೀತದ ಲಕ್ಷಣಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಜ.18ರಂದು ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರನ್ನು ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಮತ್ತೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಅವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಲಾಪುರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಸಾವಿಗೆ ಜಿಬಿಎಸ್ ಸೋಂಕು ಕಾರಣ ಎಂದು ಅಭಿಪ್ರಾಯಪಡಲಾಗಿದೆ. ಮೃತ ವ್ಯಕ್ತಿಯ ಮೆದುಳು, ರಕ್ತ ಮತ್ತು ಕರುಳಿನ ಅಂಗಾಂಶಗಳು ಸೇರಿದಂತೆ ಹಲವು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಳು ಬಂದ ನಂತರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಪುಣೆಯಲ್ಲಿ ಜಿಬಿಎಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 28 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 101ಕ್ಕೇರಿದೆ. ಈ ಪೈಕಿ 16 ರೋಗಿಗಳು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. 9 ವರ್ಷಕ್ಕಿಂತ ಕಡಿಮೆ ವಯಸ್ಸಿನ 19 ಮಕ್ಕಳಲ್ಲಿ ರೋಗಲಕ್ಷಣಗಳು ಕಂಡುಬಂದಿವೆ. 50-80 ವಯಸ್ಸಿನವರಲ್ಲಿ 23 ಪ್ರಕರಣಗಳು ವರದಿಯಾಗಿವೆ. ಕ್ಯಾಂಪೈಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾವು ಅವರ ದೇಹದಲ್ಲಿರುವುದು ಪತ್ತೆಯಾಗಿದೆ.
ಏನಿದು ಗುಲ್ಲೆನ್-ಬರ್ರೆ ಸಿಂಡ್ರೋಮ್ (ಜಿಬಿಎಸ್)?
ಜಿಬಿಎಸ್ ಎಂಬುದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಆಗುವ ಪರಿಣಾಮ. ನಮ್ಮ ದೇಹದಲ್ಲಿರುವ ಪ್ರತಿಕಾಯಗಳೇ ತಪ್ಪಾಗಿ ಗ್ರಹಿಸಿ ನರ ಮಂಡಲದ ಮೇಲೆ ದಾಳಿ ಮಾಡುವುದರಿಂದ ಉಂಟಾಗುವ ಅನಾರೋಗ್ಯ ಇದಾಗಿದೆ. ಪರಿಣಾಮವೆಂಬಂತೆ ಸೋಂಕಿತ ವ್ಯಕ್ತಿಯಲ್ಲಿ ನಿಶ್ಯಕ್ತಿ , ಪಾರ್ಶ್ವವಾಯು ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಶೇ.80ರಷ್ಟು ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆರು ತಿಂಗಳೊಳಗೆ ಸ್ವತಂತ್ರವಾಗಿ ನಡೆದಾಡುವ ಸಾಮರ್ಥ್ಯವನ್ನು ಮರಳಿ ಪಡೆಯುತ್ತಾರೆ.
ಕೆಲವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಜಿಬಿಎಸ್‌ಗೆ ಚಿಕಿತ್ಸೆಯು ದುಬಾರಿ. ರೋಗಿಗಳಿಗೆ ಇಮ್ಯುನೊಗ್ಲೋಬುಲಿನ್ (ಐವಿಐಜಿ) ಚುಚ್ಚುಮದ್ದಿನ ಅಗತ್ಯವಿದ್ದು, ಈ 1 ಚುಚ್ಚು ಮದ್ದಿಗೆ 20,000 ರೂಪಾಯಿಗಳಿವೆ.