ವಾಷಿಂಗ್ಟನ್ : ಅಮೆರಿಕದ ಡಲ್ಲಾಸ್‌ನಲ್ಲಿ ಭಾರತ ಮೂಲದ ದಂತ ವೈದ್ಯನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹೈದರಾಬಾದ್ ಚಂದ್ರಶೇಖರ್ ಪೊಲೆ ಹತ್ಯೆಗೀಡಾದ ದುರ್ದೈವಿ.
ಗುರುವಾರ ರಾತ್ರಿ ಚಂದ್ರಶೇಖರ್ ಅವರು ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಅವರು 2023ರಲ್ಲಿ ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆ ಪದವಿ ಮುಗಿಸಿ, ನಂತರ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದ ಇವರು, ಪೆಟ್ರೋಲ್ ಬಂಕ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಉದ್ಯೋಗದ ಹುಡುಕಾಟದಲ್ಲಿದ್ದರು.
ಆದರೆ, ಗುರುವಾರ ರಾತ್ರಿ ಗನ್ ಹಿಡಿದುಕೊಂಡು ಬಂದಿದ್ದ ದುಷ್ಕರ್ಮಿಗಳು ಚಂದ್ರಶೇಖರ್ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಸುದ್ದಿ ತಿಳಿದು ಹೈದರಾಬಾದ್ನಲ್ಲಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತನ ಕುಟುಂಬಸ್ಥರು ಮಗನ ಮೃತದೇಹವನ್ನು ಭಾರತಕ್ಕೆ ರವಾನೆ ಮಾಡಿಸುವಂತೆ ಆಂಧ್ರದ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಿಆರ್ಎಸ್ ಶಾಸಕ ಸುಧೀರ್ ರೆಡ್ಡಿ ಹಾಗೂ ಮಾಜಿ ಸಚಿವ ಟಿ ಹರೀಶ್ ರಾವ್ ಅವರು ಹೈದರಾಬಾದ್ನಲ್ಲಿರುವ ಮೃತನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಮೆರಿಕದಿಂದ ತವರಿಗೆ ಮೃತದೇಹ ತರಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.