ನವದೆಹಲಿ: ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಸರ್ರೆಯ ಪಟ್ಟಣದಲ್ಲಿರುವ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ 1 ತಿಂಗಳ ಅಂತರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.
ಕೆಫೆ ಮೇಲೆ ಸುಮಾರು 25 ಸುತ್ತು ಗುಂಡು ಹಾರಿಸಲಾಗಿದ್ದು, ರೆಸ್ಟೋರೆಂಟ್ನ ಗಾಜುಗಳು ಪುಡಿಪುಡಿಯಾಗಿವೆ. ಆದರೆ, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪಂಜಾಬ್ ಪೊಲೀಸ್ ಮತ್ತು ಎನ್ಐಎಗೆ ಬೇಕಾಗಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಧಿಲ್ಲೋನ್, ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಭದ್ರತಾ ಸಂಸ್ಥೆಗಳ ಪ್ರಕಾರ, ಗೋಲ್ಡಿ ಧಿಲ್ಲೋನ್ ಪ್ರಸ್ತುತ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ನಂಬಲಾಗಿದೆ ಮತ್ತು ಅವನ ವಿರುದ್ಧ ಪಂಜಾಬ್ನಲ್ಲಿ ಅನೇಕ ಕೊಲೆ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿವೆ.
ಈ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ರೆಕಾರ್ಡಿಂಗ್ ಒಂದು ಹೊರಬಿದ್ದಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಶೋ ಉದ್ಘಾಟನೆಗೆ ಕರೆದಿದ್ದಕ್ಕೆ ಈ ದಾಳಿ ನಡೆದಿದೆ ಎಂದು ಹೇಳಿದ್ದಾನೆ.
ಆಡಿಯೋದಲ್ಲೇನಿದೆ?
ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದು ಆಡಿಯೋದಲ್ಲಿ ಕೇಳಿಸುತ್ತದೆ. “ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ಮೊದಲು ಮತ್ತು ಈಗ ಎರಡನೇ ಬಾರಿಗೆ ಗುಂಡಿನ ದಾಳಿ ನಡೆದಿರುವುದು ಅವರು ನೆಟ್ಫ್ಲಿಕ್ಸ್ ಶೋನ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕೆ” ಎಂದು ಬಿಷ್ಣೋಯ್ ಗ್ಯಾಂಗ್ನ ಹ್ಯಾರಿ ಬಾಕ್ಸರ್ ಹೇಳಿದ್ದಾನೆ. ಸಲ್ಮಾನ್ ಖಾನ್ ಅವರು ಜೂನ್ 21ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾದ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್ 3ರ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಸಲ್ಮಾನ್ ಖಾನ್ ಮೇಲೆ ಏಕೆ ದ್ವೇಷ?
1998ರ ಕೃಷ್ಣ ಮೃಗ ಬೇಟೆ ಪ್ರಕರಣ ನಡೆದಾಗಿನಿಂದಲೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದೆ. ಬಿಷ್ಣೋಯ್ ಸಮುದಾಯವು ಕೃಷ್ಣ ಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ. ಇದೇ ಕಾರಣಕ್ಕೆ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಈ ದಾಳಿಗಳಿಗೆ ಪ್ರೇರಣೆ ನೀಡುತ್ತಿದ್ದಾನೆ.
ಸಲ್ಮಾನ್ ಜೊತೆ ಕೆಲಸ ಮಾಡುವವರು ತಮ್ಮ ಸಾವಿಗೆ ಅವರೇ ಕಾರಣರಾಗುತ್ತಾರೆ ಎಂದು ಗ್ಯಾಂಗ್ಸ್ಟರ್ ಆಡಿಯೋದಲ್ಲಿ ಎಚ್ಚರಿಸಿದ್ದಾನೆ. “ಯಾರಾದರೂ ಸಲ್ಮಾನ್ ಜೊತೆ ಕೆಲಸ ಮಾಡಿದರೆ, ಅದು ಚಿಕ್ಕ ನಟನಾಗಿರಲಿ ಅಥವಾ ನಿರ್ದೇಶಕನಾಗಿರಲಿ, ನಾವು ಯಾರನ್ನೂ ಬಿಡುವುದಿಲ್ಲ. ನಾವು ಅವರನ್ನು ಕೊಲ್ಲುತ್ತೇವೆ. ಅವರನ್ನು ಕೊಲ್ಲಲು ನಾವು ಯಾವುದೇ ಹಂತಕ್ಕೆ ಹೋಗುತ್ತೇವೆ,” ಎಂದು ಬಾಕ್ಸರ್ ಹೇಳಿದ್ದಾನೆ.
ಜುಲೈ 10ರಂದು ಸಹ ಈ ರೆಸ್ಟೋರೆಂಟ್ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು. ಆಗ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಕಾರ್ಯಕರ್ತ ಹರ್ಜಿತ್ ಸಿಂಗ್ ಲಡ್ಡಿ, ಶರ್ಮಾ ಅವರು ನಿಹಾಂಗ್ ಸಿಖ್ಖರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದನು.